ನಕಲಿ ಲೈಸೆನ್ಸ್ ಆರೋಪ: ಪಾಕಿಸ್ತಾನದ 15ಕ್ಕೂ ಅಧಿಕ ಪೈಲಟ್ ಗಳ ಅಮಾನತು

ಇಸ್ಲಾಮಾಬಾದ್, ಜು.18: ಸಂದೇಹಾಸ್ಪದ ಲೈಸನ್ಸ್ ಗಳನ್ನು ಹೊಂದಿದ್ದ ಆರೋಪದಲ್ಲಿ 15ಕ್ಕೂ ಅಧಿಕ ಪೈಲಟ್ ಗಳನ್ನು ಪಾಕಿಸ್ತಾನದ ವಾಯುಯಾನ ಪ್ರಾಧಿಕಾರವು ಶುಕ್ರವಾರ ಸೇವೆಯಿಂದ ಅಮಾನತುಗೊಳಿಸಿದೆ.
ವಾಯುಯಾನ ಸಚಿವಾಲಯವು ನಕಲಿ ಲೈಸೆನ್ಸ್ ಗಳನ್ನು ಹೊಂದಿದ್ದಾರೆಂಬ ಆರೋಪದಲ್ಲಿ ಈವರೆಗೆ 262 ಮಂದಿ ಪೈಲಟ್ ಗಳನ್ನು ತನಿಖೆಗೊಳಪಡಿಸಿದೆ. ಇತರ 28 ಮಂದಿ ಪೈಲಟ್ ಗಳ ಪರವಾನಿಗೆಗಳನ್ನು ಈಗಾಗಲೇ ರದ್ದುಪಡಿಸಲಾಗಿದೆ.
ಈ ಬಗ್ಗೆ ಶುಕ್ರವಾರ ಮಾಹಿತಿ ನೀಡಿದ ಪಾಕ್ ವಾಯುಯಾನ ಸಚಿವಾಲಯದ ವಕ್ತಾರ ಅಬ್ದುಲ್ ಸತ್ತಾರ್ ಖೋಕರ್ ಅವರು ಲೈಸೆನ್ಸ್ ರದ್ದತಿಗೊಂಡ 28 ಮಂದಿ ಪೈಲಟ್ಗಳು ಇನ್ನು ಮುಂದೆ ಯಾವುದೇ ವಿಮಾನಯಾನದ ಕರ್ತವ್ಯವನ್ನು ನಿರ್ವಹಿಸಲಾರರು ಹಾಗೂ ಸೂಕ್ತವಾದ ಕಾನೂನು ಪ್ರಕ್ರಿಯೆಗಳನ್ನು ನಡೆಸಿದ ಆನಂತರ ಅವರ ಪರವಾನಿಗೆಗಳನ್ನು ರದ್ದುಪಡಿಸಲಾಗಿದೆ ಎಂದು ತಿಳಿಸಿದ್ದಾರೆ.
93 ಮಂದಿ ಪೈಲಟ್ಗಳ ಪರವಾನಿಗೆಗಳ ದೃಢೀಕರಣ ಪ್ರಕ್ರಿಯೆ ನಡೆಯುತ್ತಿದ್ದು, ಉಳಿದ 141 ಪ್ರಕರಣಗಳ ತನಿಖೆ ವಾರದೊಳಗೆ ಮುಕ್ತಾಯಗೊಳ್ಳುವ ನಿರೀಕ್ಷೆಯಿದೆಯೆಂದು ಅವರು ತಿಳಿಸಿದ್ದಾರೆ.
Next Story





