ಅಮೆರಿಕದ ಮಾನವಹಕ್ಕು ಹೋರಾಟಗಾರ ಜಾನ್ ಲೆವಿಸ್ ಇನ್ನಿಲ್ಲ
ವಾಶಿಂಗ್ಟನ್, ಜು.18: ಅಮೆರಿಕದ ನಾಗರಿಕ ಹಕ್ಕುಗಳ ಚಳವಳಿಯ ನಾಯಕ ಹಾಗೂ ಮಾಜಿ ಅಮೆರಿಕ ಕಾಂಗ್ರೆಸ್ ಸಂಸದ ಜಾನ್ ಲೆವಿಸ್ ಶನಿವಾರ ನಿಧನರಾದರು. ಅವರಿಗೆ 80 ವರ್ಷ ವಯಸ್ಸಾಗಿತ್ತು. ಅವರು ಮೆದೋಜ್ಜೀರಕ ಗ್ರಂಥಿಯ ಕ್ಯಾನ್ಸರ್ ನಿಂದ ಬಳಲುತ್ತಿದ್ದರು.
1963ರಲ್ಲಿ ವರ್ಣಭೇದದ ವಿರುದ್ಧ ನಡೆದ ಐತಿಹಾಸಿಕ ಪಾದಯಾತ್ರೆಯನ್ನು ಆಯೋಜಿಸಲು ಖ್ಯಾತ ಜನಾಂಗೀಯವಾದ ವಿರೋಧಿ ಹೋರಾಟಗಾರ ಮಾರ್ಟಿನ್ ಲೂಥರ್ ಕಿಂಗ್ ಅವರಿಗೆ ನೆರವಾದ ಆರು ಮಂದಿ ಪ್ರಮುಖ ಮಾನವಹಕ್ಕು ಹೋರಾಟಗಾರರಲ್ಲಿ ಲೂಯಿಸ್ ಕೂಡಾ ಒಬ್ಬರಾಗಿದ್ದರು.
1963ರ ನಾಗರಿಕಹಕ್ಕು ಚಳವಳಿಯ ಸಮಯದಲ್ಲಿ ಸ್ಥಾಪನೆಯಾದ ಅಹಿಂಸಾತ್ಮಕ ವಿದ್ಯಾರ್ಥಿ ಸಮನ್ವಯ ಸಮಿತಿ (ಎಸ್ಎನಸಿಸಿ)ಯ ಸ್ಥಾಪಕ ಸದಸ್ಯರಲ್ಲಿ ಲೂಯಿಸ್ ಅವರೂ ಒಬ್ಬರಾಗಿದ್ದರು. ಅವರು 1963ರಿಂದ 1966ರವರೆಗೆ ಸಮಿತಿಯ ಅಧ್ಯಕ್ಷತೆ ವಹಿಸಿದ್ದರು.
1963ರಲ್ಲಿ ಮಾರ್ಟಿನ್ ಲೂಥರ್ ಕಿಂಗ್ ನೇತೃತ್ವದಲ್ಲಿ ವಾಶಿಂಗ್ಟನ್ ನಲ್ಲಿ ನಡೆದ ರ್ಯಾಲಿಯಲ್ಲಿ ಲೆವಿಸ್ ಅವರು ಉದ್ಯೋಗ ಹಾಗೂ ಸ್ವಾತಂತ್ರದಲ್ಲಿ ಸಮಾನತೆಯನ್ನು ಪ್ರತಿಪಾದಿಸಿದರು. ಈ ಐತಿಹಾಸಿಕ ರ್ಯಾಲಿಯಲ್ಲಿ ಭಾಷಣ ಮಾಡಿದವರಲ್ಲಿ ಬದುಕುಳಿದಿದ್ದ ಕೊನೆಯ ವ್ಯಕ್ತಿ ಲೂಯಿಸ್ ಆಗಿದ್ದರು.
ಲೆವಿಸ್ ಅವರ ನಿಧನಕ್ಕೆ ಅಮೆರಿಕ ಕಾಂಗ್ರೆಸ್ನ ಸ್ಪೀಕರ್ ನ್ಯಾನ್ಸಿ ಪೆಲೋಸಿ ಸಂತಾಪ ವ್ಯಕ್ತಪಡಿಸಿದ್ದಾರೆ. ‘‘ ಲೆವಿಸ್ ಅವರು ಅಮೆರಿಕದ ಇತಿಹಾಸದ ಮಹಾನ್ ನಾಯಕರಲ್ಲೊಬ್ಬರಾಗಿದ್ದಾರೆ’’ ಎಂದವರು ಶ್ರದ್ಧಾಂಜಲಿ ಸಂದೇಶದಲ್ಲಿ ತಿಳಿಸಿದ್ದಾರೆ.







