ಕಾರು ಬಹುಮಾನದ ನೆಪದಲ್ಲಿ ಸಾವಿರಾರು ರೂ. ವಂಚನೆ: ಮೊಕದ್ದಮೆ ದಾಖಲು
ಬೆಂಗಳೂರು, ಜು.18: ಕಾರು ಬಹುಮಾನ ಬಂದಿರುವುದಾಗಿ ನಂಬಿಸಿ, 46 ಸಾವಿರ ರೂ. ನಗದು ವಂಚಿಸಿರುವ ಆರೋಪ ಸಂಬಂಧ ಇಲ್ಲಿನ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲು ಮಾಡಲಾಗಿದೆ.
ಶಾಂತಿನಗರದಲ್ಲಿ ವಾಸವಾಗಿರುವ ಚಂದ್ರಶೇಖರ್ ಎಂಬವರಿಗೆ ಜು.9 ರಂದು ಮೊಬೈಲ್ ಮೂಲಕ ಸಂಪರ್ಕಿಸಿರುವ ದುಷ್ಕರ್ಮಿಗಳು, ಕಾರು ಬಹುಮಾನವಾಗಿ ಬಂದಿದ್ದು, ಇದನ್ನು ಪಡೆಯಲು ನೋಂದಣಿ ಶುಲ್ಕವಾಗಿ 8,500 ರೂ. ಪಾವತಿಸಬೇಕು ಎಂದು ಹೇಳಿದ್ದಾರೆ.
ಕಾರು ಸಿಗುವ ಆಸೆಯಲ್ಲಿ ನೋಂದಣಿ ಶುಲ್ಕ ಪಾವತಿಸಿದ ಚಂದ್ರಶೇಖರ್ ಗೆ ಮತ್ತೆ ಕರೆ ಮಾಡಿ ವಿಮೆಗಾಗಿ 22 ಸಾವಿರ ರೂ. ಕಟ್ಟುವಂತೆ ಹೇಳಿದ್ದಾರೆ. ಇದಾದ ಕೆಲವು ದಿನಗಳ ಬಳಿಕ ಸಾರಿಗೆ ಶುಲ್ಕವಾಗಿ 15 ಸಾವಿರ ರೂ. ಪಾವತಿಸುವಂತೆ ಸೂಚಿಸಿದ್ದು, ಅದರಂತೆ ಒಟ್ಟು 46 ಸಾವಿರ ರೂ.ಗಳನ್ನು ಆನ್‍ಲೈನ್ ಮೂಲಕ ಪಾವತಿಸಿದ್ದಾರೆ ಎನ್ನಲಾಗಿದೆ.
ಇದಾದ ಬಳಿಕ ದುಷ್ಕರ್ಮಿಗಳು ಮೊಬೈಲ್ ಸಂಪರ್ಕ ಕಡಿತಗೊಳಿಸಿದ್ದು, ವಂಚನೆಗೊಳಗಾಗಿರುವುದನ್ನು ಅರಿತ ಚಂದ್ರಶೇಖರ್, ನಗರ ಕೇಂದ್ರ ವಿಭಾಗದ ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.





