ರಾಜಸ್ಥಾನದಲ್ಲಿ ಮುಂದಿನ ವಾರ ಬಹುಮತ ಸಾಬೀತಿಗೆ ಕಾಂಗ್ರೆಸ್ ಸಿದ್ಧತೆ?
ಮತ್ತೊಮ್ಮೆ ರಾಜ್ಯಪಾಲರನ್ನು ಭೇಟಿಯಾದ ಅಶೋಕ್ ಗೆಹ್ಲೋಟ್

ಜೈಪುರ, ಜು.19: ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಮುಂದಿನ ವಾರ ವಿಧಾನಸಭೆಯ ಕಲಾಪ ಕರೆಯಲಿದ್ದು, ಈ ವೇಳೆ ಸದನದಲ್ಲಿ ತನ್ನ ಸರಕಾರದ ಬಹುಮತ ಸಾಬೀತುಪಡಿಸುವ ಸಾಧ್ಯತೆ ಇದೆ ಎಂದು ಎನ್‌ಡಿಟಿವಿಗೆ ಮೂಲಗಳು ತಿಳಿಸಿವೆ.
ಗೆಹ್ಲೋಟ್ ಅವರು ಶನಿವಾರ ರಾಜಭವನದಲ್ಲಿ ರಾಜ್ಯಪಾಲ ಕಲರಾಜ್ ಮಿಶ್ರಾರನ್ನು ಭೇಟಿಯಾದರು. ಪ್ರಾದೇಶಿಕ ಪಕ್ಷದ ಇಬ್ಬರು ಶಾಸಕರು ಕಾಂಗ್ರೆಸ್‌ಗೆ ಮತ್ತೆ ಬೆಂಬಲ ನೀಡುವ ಭರವಸೆ ನೀಡಿದ ಕೆಲವೇ ಗಂಟೆಗಳ ಬಳಿಕ ಗೆಹ್ಲೋಟ್ ಅವರು ರಾಜ್ಯಪಾಲರನ್ನು ಭೇಟಿಯಾಗಿ ಚರ್ಚಿಸಿದರು.
ಇದೊಂದು ಸೌಜನ್ಯದ ಭೇಟಿ ಎಂದು ಗೆಹ್ಲೋಟ್ ಹೇಳಿದ್ದರೂ ಮುಂದಿನ ವಾರ ಅಧಿವೇಶನ ಕರೆಯಲು ರಾಜ್ಯಪಾಲರ ಬಳಿ ಗೆಹ್ಲೋಟ್ ತನ್ನ ಇಚ್ಛೆ ವ್ಯಕ್ತಪಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಸಚಿನ್ ಪೈಲಟ್ ಬಣ ಸ್ಪೀಕರ್ ತಮಗೆ ನೀಡಿರುವ ಅನರ್ಹತೆಯ ನೋಟಿಸ್ ವಿರುದ್ಧ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ರಾಜಸ್ಥಾನ ಹೈಕೋರ್ಟ್ ಮಂಗಳವಾರದ ತನಕ ಮುಂದೂಡಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಮಂಗಳವಾರದ ಬಳಿಕವೇ ಸದನದಲ್ಲಿ ತನ್ನ ಶಕ್ತಿ ಪ್ರದರ್ಶನ ಮಾಡಲಿದೆ ಎಂದು ಮೂಲಗಳು ತಿಳಿಸಿವೆ.
ಸಚಿನ್ ಪೈಲಟ್ ಬಣದಲ್ಲಿ 30 ಶಾಸಕರಿದ್ದು, ಗೆಹ್ಲೋಟ್ ಸರಕಾರವನ್ನು ಉರುಳಿಸಲು ಇಷ್ಟೊಂದು ಶಾಸಕರ ಬೆಂಬಲ ಸಾಕು ಎಂದು ಬಂಡಾಯ ಬಣದವರ ವಾದವಾಗಿದೆ. ತನಗೆ 109 ಶಾಸಕರ ಬೆಂಬಲವಿದೆ ಎಂದು ಗೆಹ್ಲೋಟ್ ಹೇಳಿದ್ದಾರೆ. ಸಚಿನ್‌ಪೈಲಟ್ ಕಳೆದ ಒಂದು ವಾರದಿಂದ ಬಂಡಾಯ ಶಾಸಕರೊಂದಿಗೆ ದಿಲ್ಲಿಯಲ್ಲೇ ಬೀಡುಬಿಟ್ಟಿದ್ದಾರೆ. ಜೈಪುರಕ್ಕೆ ವಾಪಸಾಗಲು ನಿರಾಕರಿಸುತ್ತಿರುವ ಪೈಲಟ್ ಮುಖ್ಯಮಂತ್ರಿ ಗೆಹ್ಲೋಟ್ ಎರಡು ಬರಿ ನಡೆಸಿರುವ ಶಾಸಕಾಂಗ ಸಭೆಯಿಂದಲೂ ದೂರ ಉಳಿದಿದ್ದರು.
ಪೈಲಟ್‌ರನ್ನು ಈಗಾಗಲೇ ಉಪಮುಖ್ಯಮಂತ್ರಿ ಹಾಗೂ ರಾಜಸ್ಥಾನ ಕಾಂಗ್ರೆಸ್ ಮುಖ್ಯಸ್ಥ ಸ್ಥಾನದಿಂದ ವಜಾಗೊಳಿಸಲಾಗಿದೆ. ಆದರೆ,ದಿಲ್ಲಿಯ ಕಾಂಗ್ರೆಸ್ ನಾಯಕತ್ವ ಪೈಲಟ್‌ಮನವೊಲಿಕೆಯ ಪ್ರಯತ್ನವನ್ನು ಮುಂದುವರಿಸಿದೆ.





