ಉಗ್ರರಿಂದ ಅಪಹರಣವಾಗಿದ್ದ ಅಫ್ಘಾನ್ ಸಿಖ್ ಸಮುದಾಯದ ನಾಯಕನ ಬಿಡುಗಡೆ: ಕೇಂದ್ರ

ಹೊಸದಿಲ್ಲಿ, ಜು.19:ಕಳೆದ ತಿಂಗಳು ಅಫ್ಘಾನಿಸ್ತಾನದ ಪಕ್ತಿಯಾ ಪ್ರಾಂತದ ಗುರುದ್ವಾರದಿಂದ ಉಗ್ರರಿಂದ ಅಪಹರಿಸಲ್ಪಟ್ಟಿದ್ದ 55ರ ವಯಸ್ಸಿನ ಅಫ್ಘಾನ್‌ನ ಸಿಖ್ ಸಮುದಾಯದ ನಾಯಕ ನಿಡಾನ್ ಸಿಂಗ್ ಸಚ್‌ದೇವ್ ಅವರನ್ನು ಶನಿವಾರ ಉಗ್ರರ ಸೆರೆಯಿಂದ ಬಿಡುಗಡೆ ಮಾಡಲಾಗಿದೆ ಎಂದು ವಿದೇಶಾಂಗ ವ್ಯವಹಾರ ಸಚಿವಾಲಯ ತಿಳಿಸಿದೆ.
ಕೇಂದ್ರ ಸರಕಾರವು ಅಪಹರಣ ಪ್ರಕರಣವನ್ನು ಸುಖಾಂತ್ಯಗೊಳಿಸಿರುವ ಕಾಬೂಲ್ ಸರಕಾರದ ಪ್ರಯತ್ನಕ್ಕೆ ಕೃತಜ್ಞತೆ ಸಲ್ಲಿಸಿದೆ. ಸಚ್‌ದೇವ್ ಪೌರತ್ವಕ್ಕಾಗಿ ಅರ್ಜಿ ಸಲ್ಲಿಸಿದರೆ ಅವರಿಗೆ ಪೌರತ್ವ ನೀಡಲಾಗುವುದು ಎಂದು ಕೇಂದ್ರ ಸೂಚನೆ ನೀಡಿದೆ.
ನಾವು ಅಫ್ಘಾನಿಸ್ತಾನದ ಸರಕಾರ ಹಾಗೂ ಆ ಪ್ರದೇಶದ ಬುಡಕಟ್ಟು ಹಿರಿಯರಿಗೆ ನಮ್ಮ ಮೆಚ್ಚುಗೆಯನ್ನು ತಿಳಿಸುತ್ತೇವೆ. ಅವರ ಪ್ರಯತ್ನಗಳಿಂದ ನಿಡಾನ್ ಸಿಂಗ್ ಮರಳಿಕೆ ಸಾಧ್ಯವಾಗಿದೆ ಎಂದು ಕೇಂದ್ರ ಸರಕಾರ ತಿಳಿಸಿದೆ.
ತಮ್ಮ ಬಾಹ್ಯ ಬೆಂಬಲಿಗರ ಆಜ್ಞೆಯ ಮೇರೆಗೆ ಭಯೋತ್ಪಾದಕರು ಅಲ್ಪ ಸಂಖ್ಯಾತ ಸಮುದಾಯದ ಸದಸ್ಯರನ್ನು ಗುರಿಯಾಗಿಸಿಕೊಂಡು ಕಿರುಕುಳ ನೀಡುತ್ತಿರುವುದು ಗಂಭೀರ ಕಾಳಜಿಯ ವಿಚಾರವಾಗಿದೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.
ಅಫ್ಘಾನಿಸ್ತಾನದ ಹಿಂದೂ ಹಾಗೂ ಸಿಖ್ ಸಮುದಾಯದ ಮುಖಂಡರಾಗಿರುವ ಸಚ್‌ದೇವ್‌ರನ್ನು ಜೂನ್ 22ರಂದು ಪಕ್ತಿಯಾ ಪ್ರಾಂತದ ಚಮ್ಕಣಿ ಜಿಲ್ಲೆಯಲ್ಲಿ ಅಪಹರಿಸಲಾಗಿತ್ತು.







