ಇಂಗ್ಲೆಂಡ್-ವಿಂಡೀಸ್ ದ್ವಿತೀಯ ಟೆಸ್ಟ್: 3ನೇ ದಿನದಾಟ ಮಳೆಗಾಹುತಿ

ಮ್ಯಾಂಚೆಸ್ಟರ್: ಇಂಗ್ಲೆಂಡ್ ಮತ್ತು ವೆಸ್ಟ್ ಇಂಡೀಸ್ ತಂಡಗಳ ನಡುವಿನ ದ್ವಿತೀಯ ಟೆಸ್ಟ್ ನ ಮೂರನೇ ದಿನದಾಟ ಮಳೆಗಾಹುತಿಯಾಗಿದೆ.
ಮಳೆಯಿಂದಾಗಿ ಆಟ ಆರಂಭಗೊಳ್ಳಲಿಲ್ಲ. ಇದರಿಂದಾಗಿ ಗೆಲುವಿನ ಲೆಕ್ಕಚಾರದಲ್ಲಿದ್ದ ಇಂಗ್ಲೆಂಡ್‌ಗೆ ನಿರಾಶೆಯಾಗಿದೆ. . ಎರಡನೇ ದಿನ ಇಂಗ್ಲೆಂಡ್ ಮೊದಲ ಇನಿಂಗ್ಸ್‌ನಲ್ಲಿ ಡೊಮಿನಿಕ್ ಸಿಬ್ಲೇ ಮತ್ತು ಬೆನ್ ಸ್ಟೋಕ್ಸ್ ಶತಕಗಳ ನೆರವಿನಲ್ಲಿ ಇಂಗ್ಲೆಂಡ್ ಮೊದಲ ಇನಿಂಗ್ಸ್ ನಲ್ಲಿ 9 ವಿಕೆಟ್ ನಷ್ಟದಲ್ಲಿ 469 ರನ್ ಗಳಿಸಿ ಡಿಕ್ಲೇರ್ ಮಾಡಿತ್ತು. ಬಳಿಕ ಮೊದಲ ಇನಿಂಗ್ಸ್ ಆರಂಭಿಸಿದ ವೆಸ್ಟ್ ಇಂಡೀಸ್ ದಿನದಾಟದಂತ್ಯಕ್ಕೆ 14 ಓವರ್‌ಗಳಲ್ಲಿ 1 ವಿಕೆಟ್ ನಷ್ಟದಲ್ಲಿ 32 ರನ್ ಗಳಿಸಿತ್ತು. ಕ್ಯಾಂಪ್‌ಬೆಲ್ 12 ರನ್ ಗಳಿಸಿ ಔಟಾಗಿದ್ದರು. ಬ್ರಾಟ್‌ವೈಟ್ ಔಟಾಗದೆ 6 ರನ್ ಮತ್ತು ಅಲ್ಝಾರಿ ಜೋಸೆಫ್ 14 ರನ್ ಗಳಿಸಿ ಕ್ರೀಸ್‌ನಲ್ಲಿದ್ದರು.
ಜೆವಿಕ ಸುರಕ್ಷಿತ ಶಿಷ್ಟಾಚಾರ ಉಲ್ಲಂಘನೆ: ಆರ್ಚರಿಗೆ ದಂಡ
ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ವೇಳೆ ಜೈವಿಕ ಸುರಕ್ಷಿತ ಶಿಷ್ಟಾಚಾರ ಉಲ್ಲಂಘನೆ ಆರೋಪದಲ್ಲಿ ಇಂಗ್ಲೆಂಡ್ ವೇಗಿ ಜೋಫ್ರಾ ಆರ್ಚರ್‌ಗೆ ದಂಡವನ್ನು ವಿಧಿಸಲಾಗಿದೆ ಮತ್ತು ತಂಡದ ಲಿಖಿತ ಎಚ್ಚರಿಕೆ ನೀಡಲಾಗಿದೆ.
ಆರ್ಚರ್‌ಗೆ ವಿಧಿಸಲಾದ ದಂಡದ ಮೊತ್ತವೆಷ್ಟು ಎನ್ನುವುದನ್ನು ಬಹಿರಂಗಪಡಿಸಲಾಗಿಲ್ಲ.
ಸೋಮವಾರ ಹ್ಯಾಂಪ್‌ಶೈರ್‌ನ ರೋಸ್ ಬೌಲ್‌ನಲ್ಲಿ ನಡೆದ ಮೊದಲ ಟೆಸ್ಟ್‌ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ನಾಲ್ಕು ವಿಕೆಟ್‌ಗಳ ಅಂತರದಲ್ಲಿ ಸೋಲು ಅನುಭವಿಸಿದ ನಂತರ ಇಂಗ್ಲೆಂಡ್ ಟೆಸ್ಟ್ ತಂಡದ ಆಟಗಾರರು ಪ್ರತ್ಯೇಕ ಕಾರುಗಳಲ್ಲಿ ಮ್ಯಾಂಚೆಸ್ಟರ್‌ಗೆ ಪ್ರಯಾಣ ಬೆಳೆಸಿದರು.
230 ಮೈಲಿ ಪ್ರಯಾಣದಲ್ಲಿ ಊಟ ಮಾಡಲು ಜೈವಿಕ ಸುರಕ್ಷತೆ ಇರುವ ಕೌಂಟಿ ಗ್ರೌಂಡ್ ಮತ್ತು ಪೂರ್ವ ಅನುಮೋದಿತ ಪೆಟ್ರೋಲ್ ಬಂಕ್‌ಗಳಲ್ಲಿ ವಾಹನಕ್ಕೆ ಪೆಟ್ರೋಲ್ ತುಂಬಿಸುವುದನ್ನು ಹೊರತುಪಡಿಸಿ ಇಂಗ್ಲೆಂಡ್ ಕ್ರಿಕೆಟಿಗರಿಗೆ ಯಾವುದೇ ವಿರಾಮ ತೆಗೆದುಕೊಳ್ಳದಂತೆ ಸೂಚಿಸಲಾಗಿತ್ತು.
ಆದಾಗ್ಯೂ, ಮ್ಯಾಂಚೆಸ್ಟರ್‌ಗೆ ಹೋಗುವ ಮಾರ್ಗದಲ್ಲಿ ಹೋವ್‌ನಲ್ಲಿರುವ ತನ್ನ ಫ್ಲ್ಯಾಟ್‌ಗೆ ಅನಧಿಕೃತ ಭೇಟಿ ನೀಡುವ ಮೂಲಕ ಆರ್ಚರ್ ನಿಯಮಗಳನ್ನು ಮುರಿದರು.
ಉಲ್ಲಂಘನೆಯ ನಂತರ, ಕೆರಿಬಿಯನ್ ತಂಡದ ವಿರುದ್ಧ ನಡೆಯುತ್ತಿರುವ ಮೂರು ಪಂದ್ಯಗಳ ಸರಣಿಯ ಎರಡನೇ ಟೆಸ್ಟ್ ಪಂದ್ಯದಿಂದ ಇಂಗ್ಲೆಂಡ್ ತಂಡದ ಮ್ಯಾನೇಜ್‌ಮೆಂಟ್ ಆರ್ಚರ್ ಅವರನ್ನು ಹೊರಗಿಟ್ಟಿತ್ತು.
ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ (ಇಸಿಬಿ) ವ್ಯವಸ್ಥಾಪಕ ನಿರ್ದೇಶಕ ಆಶ್ಲೇ ಗೈಲ್ಸ್ ಅವರ ಅಧ್ಯಕ್ಷತೆಯಲ್ಲಿ ನಡೆದ ಪ್ರಕರಣದ ವಿಚಾರಣೆಯ ನಂತರ ಆರ್ಚರ್‌ಗೆ ದಂಡ ವಿಧಿಸಿ, ಎಚ್ಚರಿಕೆ ನೀಡಲಾಗಿದೆ.







