ಬಿಸಿಸಿಐನ ಜನರಲ್ ಮ್ಯಾನೇಜರ್ ಹುದ್ದೆಗೆ ಸಾಬಾ ಕರೀಮ್ ರಾಜೀನಾಮೆ

ಮುಂಬೈ, ಜು.19: ಭಾರತದ ಮಾಜಿ ವಿಕೆಟ್‌ಕೀಪರ್ ಸಾಬಾ ಕರೀಮ್ ಭಾರತೀಯ ಕ್ರಿಕೆಟ್ ಮಂಡಳಿ(ಬಿಸಿಸಿಐ)ಯ ಕ್ರಿಕೆಟ್ ಆಪರೇಶನ್‌ನ ಪ್ರಧಾನ ಪ್ರಬಂಧಕ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.
ಕಳೆದ ವಾರ ಸಿಇಒ ರಾಹುಲ್ ಜೊಹ್ರಿ ರಾಜೀನಾಮೆ ನೀಡಿದ ಬಳಿಕ ಸಾಬಾ ಕರೀಮ್ ಬಿಸಿಸಿಐಯಿಂದ ನಿರ್ಗಮಿಸುತ್ತಿರುವ ಎರಡನೇ ಪ್ರಮುಖ ಅಧಿಕಾರಿಯಾಗಿದ್ದಾರೆ.
ರಾಜೀನಾಮೆ ನೀಡಿ ಅಥವಾ ಉಚ್ಚಾಟನೆಯನ್ನು ಎದುರಿಸಿ ಎಂದು ಕರೀಮ್‌ಗ ಸೂಚಿಸಲಾಗಿತ್ತು. ಬಿಸಿಸಿಐ ಹೊಸ ವೃತ್ತಿಪರರೊಂದಿಗೆ ಕೆಲಸ ಮಾಡಲು ಬಯಸಿದೆ ಎನ್ನುವುದು ಇದರಿಂದ ಸ್ಪಷ್ಟವಾಗಿದೆ ಎಂದು 'ಇಂಡಿಯನ್ ಎಕ್ಸ್‌ಪ್ರೆಸ್ ' ವರದಿ ಮಾಡಿದೆ.
ದೇಶೀಯ ಕ್ರಿಕೆಟ್ ಬೆಳವಣಿಗೆಯಲ್ಲಿ ಮಹತ್ವದ ಪಾತ್ರವಹಿಸಿರುವ ಕರೀಮ್, ರಾಹುಲ್ ದ್ರಾವಿಡ್‌ರನ್ನು ರಾಷ್ಟ್ರೀಯ ಕ್ರಿಕೆಟ್ ಅಕಾಡಮಿ ಅಧ್ಯಕ್ಷರಾಗಿ ನೇಮಕ ಮಾಡುವಲ್ಲಿಯೂ ಸಲಹ ನೀಡಿದ್ದರು. ಕರೀಮ್ 2018ರ ಜನವರಿಯಲ್ಲಿ ಹುದ್ದೆಯನ್ನು ವಹಿಸಿಕೊಂಡಿದ್ದು,ಜುಲೈ 18ರಂದು ಬಿಸಿಸಿಐ ಕಾರ್ಯದರ್ಶಿ ಜಯ ಶಾ ಹಾಗೂ ಅಧ್ಯಕ್ಷ ಸೌರವ್ ಗಂಗುಲಿಗೆ ತನ್ನ ರಾಜೀನಾಮೆಯನ್ನು ಕಳುಹಿಸಿಕೊಟ್ಟಿದ್ದಾರೆ.
ನಾವು ರಾಜೀನಾಮೆಯನ್ನು ಸ್ವೀಕರಿಸಿದ್ದೇವೆ.ಅವರು ತಮ್ಮ ಸೂಚನೆಯ ಅವಧಿಯನ್ನು ಪೂರೈಸಿದ್ದಾರೆ. ಕ್ರಿಕೆಟ್ ಮಂಡಳಿಯು ಕ್ರಿಕೆಟ್ ಆಪರೇಶನ್‌ನ ನೂತನ ಜಿಎಂ ಹುದ್ದೆಯನ್ನು ಭರ್ತಿ ಮಾಡಲು ಪದಾಧಿಕಾರಿಗಳಿಗೆ ಅಪೆಕ್ಸ್ ಕೌನ್ಸಿಲ್ ಅಧಿಕಾರವನ್ನು ನೀಡಿದೆ ಎಂದು ಮಂಡಳಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮಾಜಿ ವಿಕೆಟ್‌ಕೀಪರ್-ಬ್ಯಾಟ್ಸ್‌ಮನ್ ಕರೀಮ್ 1 ಟೆಸ್ಟ್ ಹಾಗೂ 34 ಏಕದಿನ ಪಂದ್ಯಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ. 18 ವರ್ಷಗಳ ಪ್ರಥಮ ದರ್ಜೆಕ್ರಿಕೆಟ್ ಬದುಕಿನಲ್ಲಿ 120 ಪಂದ್ಯಗಳು ಹಾಗೂ 124 ಲಿಸ್ಟ್‌ಎ ಪಂದ್ಯಗಳಲ್ಲಿ ಆಡಿದ್ದಾರೆ. ಪ್ರಥಮ ದರ್ಜೆ ಪಂದ್ಯಗಳಲ್ಲಿ 56.66ರ ಸರಾಸರಿಯಲ್ಲಿ 22 ಶತಕ ಹಾಗೂ 33 ಅರ್ಧಶತಕಗಳ ಸಹಿತ 7,000ಕ್ಕೂ ಅಧಿಕ ರನ್ ಗಳಿಸಿದ್ದಾರೆ. ಆರಂಭದಲ್ಲಿ ಬಿಹಾರ ಹಾಗೂ ಬಳಿಕ ಬಂಗಾಳದ ಪರ ಕರೀಮ್ ಆಡಿದ್ದರು.







