ರಾಜತಾಂತ್ರಿಕ ಮಾರ್ಗದ ಮೂಲಕ 180 ಕೆ.ಜಿ. ಚಿನ್ನ: ಕೇರಳ ಕಳ್ಳ ಸಾಗಾಣಿಕೆ ಪ್ರಕರಣಕ್ಕೆ ಹೊಸ ತಿರುವು

ತಿರುವನಂತಪುರ: ಇಲ್ಲಿನ ಯುಎಇ ಕಾನ್ಸುಲೇಟ್ ನಲ್ಲಿ ರಾಜತಾಂತ್ರಿಕ ಮಾರ್ಗ್ ಮೂಲಕ 30 ಕೆ.ಜಿ. ಚಿನ್ನ ಕಳ್ಳಸಾಗಾಣಿಕೆ ಮಾಡಿದ ಪ್ರಕರಣದ ಇಬ್ಬರು ಪ್ರಮುಖ ಆರೋಪಿಗಳನ್ನು ಶನಿವಾರ ನಗರದ ವಿವಿಧ ಕಡೆಗಳಿಗೆ ಕರೆದೊಯ್ದು ಪುರಾವೆ ಸಂಗ್ರಹಿಸಲಾಯಿತು. ಈ ಬಗ್ಗೆ ತನಿಖೆ ನಡೆಸುತ್ತಿರುವ ಪೊಲೀಸರು ಸ್ವಪ್ನಾ ಸುರೇಶ್ ಹಾಗೂ ಸರಿತ್ ಅವರನ್ನು ಅವರ ಮನೆಗಳಿಗೆ ಹಾಗೂ ಕಚೇರಿಗಳಿಗೆ ಕರೆದೊಯ್ದರು.
ರಾಜತಾಂತ್ರಿಕ ಮಾರ್ಗದ ಮೂಲಕ 180 ಕೆ.ಜಿ.ಚಿನ್ನ ಕಳ್ಳಸಾಗಾಟ ಮಾಡಿರುವುದಕ್ಕೆ ನಿಖರವಾದ ಪುರಾವೆಗಳು ಲಭಿಸಿವೆ. ಅದನ್ನು ವಶಪಡಿಸಿಕೊಳ್ಳುವ ಪ್ರಯತ್ನ ನಡೆದಿದೆ. ಆದರೆ ಕಳ್ಳಸಾಗಾಣಿಕೆ ಮಾಡಲಾದ ಚಿನ್ನದ ಮೌಲ್ಯ ಇನ್ನೂ ಅಧಿಕ ಇರಬಹುದು ಎಂದು ತನಿಖೆ ನಡೆಸುತ್ತಿರುವ ಏಜೆನ್ಸಿಯ ಉನ್ನತ ಅಧಿಕಾರಿಯೊಬ್ಬರು ವಿವರಿಸಿದ್ದಾರೆ ಎಂದು ndtv.com ವರದಿ ಮಾಡಿದೆ.
ಈ ಮೂಲಕ 12-13 ಬಾರಿ ಕಳ್ಳಸಾಗಾಣಿಕೆ ನಡೆದಿದೆ ಎಂದು ತಿಳಿದುಬಂದಿದೆ. ಸ್ವಪ್ನಾ ಹಾಗೂ ಸರೀತ್ ಈ ಕಳ್ಳಸಾಗಾಣಿಕೆ ಮಾರ್ಗವನ್ನು ಕಂಡುಕೊಂಡಿದ್ದು, ಸಂದೀಪ್ ನಾಯರ್, ರಮೀಝ್ ಸೇರಿದಂತೆ ಇತರ ಆರೋಪಿಗಳು ಹಣಕಾಸು ನೆರವು ನೀಡುವವರು ಹಾಗೂ ವಿತರಕರ ಜತೆ ಸಂಪರ್ಕ ಹೊಂದಿದ್ದರು ಎಂದು ಶಂಕಿಸಲಾಗಿದೆ.
“ಭಾರತ ತ್ಯಜಿಸಿರುವ ಯುಎಇ ರಾಜತಾಂತ್ರಿಕ ಈ ಪ್ರಕರಣಕ್ಕೆ ಪ್ರಮುಖ. ರಾಜತಾಂತ್ರಿಕ ವರ್ಗಕ್ಕೆಇರುವ ವಿಶೇಷ ಸೌಲಭ್ಯವನ್ನು ದುರುಪಯೋಗಪಡಿಸಿಕೊಂಡು ಈ ಸಿಂಡಿಕೇಟ್ ರಚಿಸಲಾಗಿದೆ”ಎಂದು ತನಿಖಾಧಿಕಾರಿಯೊಬ್ಬರು ಸ್ಪಷ್ಟಪಡಿಸಿದ್ದಾರೆ.







