ರಾಜಸ್ಥಾನ ರಾಜಕೀಯ ಬಿಕ್ಕಟ್ಟು: ಪೈಲಟ್ ಬಣದ ವಿರುದ್ಧ 'ಬಿ' ಪ್ಲಾನ್ ಸಿದ್ಧಪಡಿಸಿದ ಕಾಂಗ್ರೆಸ್

ಹೊಸದಿಲ್ಲಿ, ಜು.19: ಸಚಿನ್ ಪೈಲಟ್ ಹಾಗೂ ಇತರ ಬಂಡಾಯ ಶಾಸಕರು ರಾಜಸ್ಥಾನ ಹೈಕೋರ್ಟ್‌ನಿಂದ ಅನರ್ಹತೆಯ ತೂಗುಗತ್ತಿಯಿಂದ ಪಾರಾದರೆ ಪರ್ಯಾಯ ಯೋಜನೆ ರೂಪಿಸಲು ಕಾಂಗ್ರೆಸ್ ನಿರ್ಧರಿಸಿದೆ. ಸೋಮವಾರ ಕೋರ್ಟ್‌ನಲ್ಲಿ ವಿಚಾರಣೆ ಮತ್ತೆ ಆರಂಭವಾಗಲಿದೆ.
ನಾವು ಯಾವುದೆ ಪಕ್ಷ ವಿರೋಧಿ ಚಟುವಟಿಕೆಗಳಲ್ಲಿ ಭಾಗಿಯಾಗಿಲ್ಲ ಎಂದಿರುವ ಪೈಲಟ್ ಬಣ ಕಳೆದ ವಾರ ಕಾಂಗ್ರೆಸ್‌ನ್ನು ನ್ಯಾಯಾಲಯಕ್ಕೆ ಕರೆದೊಯ್ದಿದ್ದರು.
ನ್ಯಾಯಾಲಯವು ಒಂದು ವೇಳೆ ಪೈಲಟ್ ಬಣದ ಪರ ತೀರ್ಪು ನೀಡಿದರೆ, ಕಾಂಗ್ರೆಸ್ ಪಕ್ಷ ವಿಧಾನಸಭೆಯ ಕಲಾಪ ಕರೆಯುವ ಯೋಜನೆ ಹಾಕಿಕೊಂಡಿದೆ ಎಂದು ಕಾಂಗ್ರೆಸ್‌ನ ಕಾನೂನು ತಂಡ ತಿಳಿಸಿದೆ.
ಕಾಂಗ್ರೆಸ್ ಪಕ್ಷ ತನಗೆ ಬಹುಮತವಿದೆ ಎಂದು ಹೇಳುತ್ತಿರುವ ಹಿನ್ನೆಲೆಯಲ್ಲಿ ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ತಮ್ಮ ಬಹುಮತವನ್ನು ಸಾಬೀತುಪಡಿಸಬಹುದು. ನ್ಯಾಯಾಲಯದಲ್ಲಿ ಪ್ರತಿವಾದಿಯಾಗಿರುವ ಮುಖ್ಯ ಸಚೇತಕ ಮಹೇಶ್ ಜೋಶಿ ಕಾಂಗ್ರೆಸ್‌ನ ಎಲ್ಲ ಸದಸ್ಯರು ಪಕ್ಷದ ಪರವಾಗಿ ಮತ ಚಲಾಯಿಸಲು ವಿಪ್ ನೀಡಲಿದ್ದಾರೆ.
ಒಂದು ವೇಳೆ ಪೈಲಟ್ ಬಣ ವಿಪ್‌ನ್ನು ಉಲ್ಲಂಘಿಸಿದರೆ ಅಥವಾ ತ್ಯಜಿಸಿದರೆ ವಿಪ್‌ನ ವಿರುದ್ಧವಾಗಿ ವರ್ತಿಸಿದ್ದಕ್ಕೆ 10ನೇ ಶೆಡ್ಯೂಲ್‌ನ ಸೆಕ್ಷನ್ 2(1)(ಬಿ) ಅಡಿಯಲ್ಲಿ ಎಲ್ಲರನ್ನೂ ಅನರ್ಹಗೊಳಿಸಲಾಗುತ್ತದೆ. ಅನರ್ಹ ಶಾಸಕರು ಇದನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಬಹುದು.
ಇದೀಗ ಪೈಲಟ್ ಹಾಗೂ ಅವರ ಬೆಂಬಲಿಗರ ವಿರುದ್ಧ 10ನೇ ಶೆಡ್ಯೂಲ್‌ನ ಸೆಕ್ಷನ್ 2(1)(ಎ)ಅಡಿ ಅನರ್ಹಗೊಳಿಸುವ ಪ್ರಕ್ರಿಯೆ ನಡೆಯುತ್ತಿದೆ. ಇದಕ್ಕೆ ತಡೆ ಹೇರಲು ಪೈಲಟ್ ಬಣ ಹೈಕೋರ್ಟಿನ ಮೆಟ್ಟಿಲೇರಿದೆ.







