ಸ್ವಿಸ್ ಖಾತೆಯಲ್ಲಿ ಅಘೋಷಿತ 196 ಕೋಟಿ ರೂ.: ದಂಡ ಪಾವತಿಸಲು 80 ವರ್ಷದ ಮಹಿಳೆಗೆ ಆದೇಶ

ಮುಂಬೈ: ಸ್ವಿಸ್ ಬ್ಯಾಂಕ್ ಖಾತೆಯಲ್ಲಿ ಹೊಂದಿದ್ದ 196 ಕೋಟಿ ರೂಪಾಯಿ ಅಘೋಷಿತ ಹಣಕ್ಕೆ ದಂಡ ಪಾವತಿಸುವಂತೆ 80 ವರ್ಷದ ಮಹಿಳೆಗೆ ಆದಾಯ ತೆರಿಗೆ ಮೇಲ್ಮನವಿ ನ್ಯಾಯ ಮಂಡಳಿಯ ಮುಂಬೈ ಪೀಠ ಆದೇಶ ನೀಡಿದೆ. ಈ ಮೊತ್ತಕ್ಕೆ ತೆರಿಗೆ ಹಾಗೂ ದಂಡವನ್ನು ಮಹಿಳೆ ಪಾವತಿಸಬೇಕಾಗಿದೆ.
ರೇಣುತಾರಣಿ ಎಂಬ 80ರ ಆಸುಪಾಸಿನ ವೃದ್ಧೆ ತರಣಿ ಫ್ಯಾಮಿಲಿ ಟ್ರಸ್ಟ್ ಎಚ್‍ಎಸ್ ಬಿಸಿ ಜಿನೀವಾ ಶಾಖೆಯಲ್ಲಿ ಹೊಂದಿದ್ದ ಸ್ವಿಸ್ ಬ್ಯಾಂಕ್ ಖಾತೆಯ ಏಕೈಕ ಫಲಾನುಭವಿಯಾಗಿದ್ದಾರೆ ಎಂದು ನ್ಯಾಯಮಂಡಳಿ ದೃಢಪಡಿಸಿದೆ. 2004ರ ಜುಲೈನಲ್ಲಿ ಕೇಮನ್ ದ್ವೀಪದ ಕಂಪನಿ ಎಂದು ಹೇಳಲಾದ ಜಿಡಬ್ಲ್ಯುಯು ಇನ್ ವೆಸ್ಟ್ ಮೆಂಟ್ ಹೆಸರಿನಲ್ಲಿ ಈ ಖಾತೆ ಆರಂಭಿಸಲಾಗಿತ್ತು. ವ್ಯಾಜ್ಯ ನಿರ್ಣಯ ಕಂಪನಿ ಎನ್ನಲಾದ ಈ ಕಂಪನಿ ಕುಟುಂಬ ಟ್ರಸ್ಟ್ ಗೆ ಈ ಹಣವನ್ನು ವರ್ಗಾಯಿಸಿತ್ತು. ಸಹಜವಾಗಿಯೇ ಸಾಗರೋತ್ತರ ಟ್ರಸ್ಟ್ ನ ಫಲಾನುಭವಿಗಳು ವಿದೇಶಿ ಬ್ಯಾಂಕ್ ಖಾತೆ ಇದೆ ಎಂಬ ಆರೋಪವನ್ನು ಅಲ್ಲಗಳೆದಿದ್ದರು. ಆದರೆ ಇಬ್ಬರು ತೆರಿಗೆ ಪಾವತಿದಾರರು ತಮ್ಮ ತೆರಿಗೆ ಸ್ಥಿತಿಯನ್ನು ಅನಿವಾಸಿ ಭಾರತೀಯ ಎಂದು ನಮೂದಿಸಿದ್ದರು. ಎನ್‍ಆರ್ ಐಗಳು ತಮ್ಮ ಸಾಗರೋತ್ತರ ಆದಾಯಕ್ಕೆ ತೆರಿಗೆ ಪಾವತಿಸಬೇಕಿಲ್ಲ.
ಆದರೆ ಈ ಪ್ರಕರಣದಲ್ಲಿ ಸಾಗರೋತ್ತರ ಟ್ರಸ್ಟ್, ಸಂಸ್ಥೆಗಳು ಮತ್ತು ನಾಮನಿರ್ದೇಶಿತ ನಿರ್ದೇಶಕರ ಸಂಕೀರ್ಣ ಜಾಲದ ಮೂಲಕ ಹಣ ಪಾವತಿಸಿದ್ದನ್ನು ತೆರಿಗೆ ಅಧಿಕಾರಿಗಳು ಪತ್ತೆ ಮಾಡಿ ಐಟಿಎಟಿಗೆ ಈ ವಿವರ ಸಲ್ಲಿಸಿದ್ದರು. ಆದರೆ ರೇಣುತಾರಣಿ ಈ ಬ್ಯಾಂಕ್ ಖಾತೆಯ ನೈಜ ಫಲಾನುಭವಿ ಎನ್ನುವುದು ಆದಾಯ ತೆರಿಗೆ ಅಧಿಕಾರಿಗಳ ತನಿಖೆಯಿಂದ ದೃಢಪಟ್ಟಿತ್ತು.





