ಶಾಲೆ ಬಿಟ್ಟು 32 ವರ್ಷಗಳ ಬಳಿಕ 12ನೇ ತರಗತಿ ಉತ್ತೀರ್ಣರಾದ 50 ವರ್ಷದ ಮಹಿಳೆ

ಶಿಲ್ಲಾಂಗ್: ಮೂವತ್ತೆರಡು ವರ್ಷಗಳ ಹಿಂದೆ ಶಾಲೆ ಬಿಟ್ಟಿದ್ದ 50 ವರ್ಷ ವಯಸ್ಸಿನ ಮಹಿಳೆಯೊಬ್ಬರು 12ನೇ ತರಗತಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನ ಮೂಡಿಸಿದ್ದಾರೆ.
ಎಚ್‍ಎಸ್‍ಎಲ್ ಸಿಸಿ ಪರೀಕ್ಷಾ ಮಂಡಳಿ ನಡೆಸಿದ ಪರೀಕ್ಷೆಯ ಕಲಾ ವಿಭಾಗದ ಫಲಿತಾಂಶ ಸೋಮವಾರ ಪ್ರಕಟವಾಗಿದ್ದು, ಲೆಕಿಂಟ್ಯೂ ಸೀಮ್ಲೀಹ್ (50) ಈ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ ಎಂದು ಮಂಡಳಿ ವೆಬ್ ಸೈಟ್ ನಿಂದ ತಿಳಿದುಬಂದಿದೆ.
ರಿಭೋಯಿ ಜಿಲ್ಲೆಯ ಬಲ್ವಾನ್ ಕಾಲೇಜಿನಲ್ಲಿ ಸಮವಸ್ತ್ರದೊಂದಿಗೆ ತರಗತಿಗೆ ಹಾಜರಾಗುತ್ತಿದ್ದ ಅತ್ಯಂತ ಹಿರಿಯ ವಿದ್ಯಾರ್ಥಿನಿ ಎಂಬ ಹೆಗ್ಗಳಿಕೆಗೆ ಇವರು ಪಾತ್ರರಾಗಿದ್ದರು. ಪರೀಕ್ಷೆಯಲ್ಲಿ ಉತ್ತೀರ್ಣರಾದ ಬಗ್ಗೆ ಅತೀವ ಸಂತಸವಿದೆ ಎಂದು ಲೆಕಿಂಟ್ಯೂ ಹೇಳುತ್ತಾರೆ.
ಭಾರತೀಯ ಭಾಷೆಗಳಲ್ಲಿ ಉನ್ನತ ಶಿಕ್ಷಣ ಕೈಗೊಳ್ಳುವ ಉದ್ದೇಶ ತನ್ನದು ಎಂದು ಮಹಿಳೆ ಹೇಳುತ್ತಾರೆ. ಗಣಿತಶಾಸ್ತ್ರ ಕಬ್ಬಿಣದ ಕಡಲೆ ಎಂಬ ಕಾರಣಕ್ಕಾಗಿ 1988ರಲ್ಲಿ ಇವರು ಶಾಲೆ ಬಿಟ್ಟಿದ್ದರು. 2008ರಲ್ಲಿ ಶಾಲಾಪೂರ್ವ ಮಕ್ಕಳಿಗೆ ಪಾಠ ಮಾಡುವ ಅವಕಾಶ ಒದಗಿ ಬಂದಾಗ ಇ-ಕಲಿಕೆ ಬಗ್ಗೆ ಆಸಕ್ತಿ ಹುಟ್ಟಿತು ಎಂದು ಅವರು ವಿವರಿಸುತ್ತಾರೆ.
ಈ ಶಾಲೆಯಲ್ಲಿ ಸಿಕ್ಕಿದ ಹುದ್ದೆ ಉಳಿಸಿಕೊಳ್ಳಲು 26 ವರ್ಷಗಳ ಬಳಿಕ ಅಂದರೆ 2015ರಲ್ಲಿ ಲೆಕಿಂಟ್ಯೂ ಐಜಿಎನ್‍ಓಯುನ ದೂರಶಿಕ್ಷಣ ಕೋರ್ಸ್ ಗೆ ಸೇರಿದರು. ಈ ಕೋರ್ಸ್‍ನಲ್ಲಿ ಗಣಿತ ಇಲ್ಲದಿದ್ದುದು ಖುಷಿ ಕೊಟ್ಟಿತು ಎಂದು ಹೇಳುತ್ತಾರೆ.
ಈ ಹಿರಿಯಜ್ಜಿಯ ಸಾಧನೆಯನ್ನು ಶಿಕ್ಷಣ ಸಚಿವ ಲೆಹ್ಮನ್ ರಿಬೂಯಿ ಅಭಿನಂದಿಸಿದ್ದು, ಆಕೆಯ ಯಶೋಗಾಥೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.







