ಕಲಬುರಗಿ: ಕೋವಿಡ್ 19 ಆಸ್ಪತ್ರೆಯಲ್ಲಿ ಅಡ್ಡಾಡುತ್ತಿದ್ದ ಹಂದಿಗಳ ಗುಂಪು!
ತಕ್ಷಣ ಕ್ರಮ ಕೈಗೊಂಡ ಜಿಲ್ಲಾಧಿಕಾರಿ

ಕಲಬುರಗಿ: ಇಲ್ಲಿನ ಕೋವಿಡ್ 19 ಆಸ್ಪತ್ರೆಯಲ್ಲಿ ಹಂದಿಗಳ ಗುಂಪೊಂದು ಅಡ್ಡಾಡುತ್ತಿರುವ ವಿಡಿಯೋ ಮತ್ತು ಫೋಟೊಗಳು ವೈರಲ್ ಆಗಿದ್ದು, ಭಾರೀ ಆಕ್ರೋಶ ಸೃಷ್ಟಿಸಿದೆ.
ಆಸ್ಪತ್ರೆಯ ಆವರಣದಲ್ಲಿ, ವರಾಂಡದಲ್ಲಿ ಹಲವು ಹಂದಿಗಳು ಓಡಾಡುತ್ತಿರುವ ವಿಡಿಯೊಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಕಲಬುರಗಿಯ ಜಿಮ್ಸ್ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದೆ.
ಈ ಬಗ್ಗೆ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ಆಸ್ಪತ್ರೆಗೆ ದಿಢೀರ್ ಭೇಟಿ ನೀಡಿದ ಜಿಲ್ಲಾಧಿಕಾರಿ ಶರತ್ ಬಿ. ಸ್ಥಳದಲ್ಲಿದ್ದ ಹಂದಿ ಮಾಲಕನಿಗೆ ಕೂಡಲೇ ಆಸ್ಪತ್ರೆ ಆವರಣದಲ್ಲಿರುವ ಎಲ್ಲಾ ಹಂದಿಗಳನ್ನು ಸ್ಥಳಾಂತರಗೊಳಿಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಆಸ್ಪತ್ರೆ ಆವರಣದಲ್ಲಿ ಹಂದಿಗಳಿದ್ದರೂ ಇದರ ಸ್ಥಳಾಂತರಕ್ಕೆ ಕ್ರಮ ಕೈಗೊಳ್ಳದ ಜಿಮ್ಸ್ ಅಧಿಕಾರಿಗಳ ಕಾರ್ಯಕ್ಕೆ ಅತೃಪ್ತಿ ವ್ಯಕ್ತಪಡಿಸಿದ ಜಿಲ್ಲಾಧಿಕಾರಿಗಳು, ಆಸ್ಪತ್ರೆ ಸುತ್ತಮುತ್ತ ಸ್ವಚ್ಛತೆ, ಗುಣಮಟ್ಟದ ಪರಿಸರ ಕಾಪಾಡುವುದು ಆಸ್ಪತ್ರೆಯ ಜವಾಬ್ದಾರಿಯಾಗಿದೆ. ದಿನನಿತ್ಯ ಸಾವಿರಾರು ರೋಗಿಗಳು ಆಸ್ಪತ್ರೆಗೆ ಭೇಟಿ ನಿಡುತ್ತಾರೆ. ಹೀಗಾಗಿ ಇಲ್ಲಿ ಆರೋಗ್ಯ ನೈರ್ಮಲ್ಯ ಕಾಪಾಡುವತ್ತ ಹೆಚ್ಚಿನ ಗಮನಹರಿಸಬೇಕು ಎಂದರು.
ಆಸ್ಪತ್ರೆ ಆವರಣದಲ್ಲಿ ಹಂದಿಗಳು ಅಡ್ಡಾಡುತ್ತಿರುವುದು ಗಂಭೀರ ತಪ್ಪು. ಇಲ್ಲಿ ಹಂದಿಗಳನ್ನು ಬಿಟ್ಟಿರುವ ಮಾಲಕನ ಮೇಲೆ ಕೂಡಲೆ ಎಫ್.ಐ.ಆರ್. ದಾಖಲಿಸುವಂತೆ ಜಿಮ್ಸ್ ಅಧಿಕಾರಿಗಳಿಗೆ ಸೂಚನೆ ನೀಡಿದ ಜಿಲ್ಲಾಧಿಕಾರಿಗಳು, ಆಸ್ಪತ್ರೆ ಸುತ್ತಮುತ್ತ ಗೋಡೆಗಳ ಭದ್ರತೆ ಪರಿಶೀಲಿಸಿ ಹಂದಿಗಳು ಬರಲು ಸಣ್ಣ-ಪುಟ್ಟ ದಾರಿಗಳಿದ್ದಲ್ಲಿ ಎಲ್ಲವನ್ನು ಬ್ಯಾರಿಕೇಡ್ ಹಾಕಿ ಬಂದ್ ಮಾಡುವಂತೆ ಪಾಲಿಕೆ ಆಯುಕ್ತ ರಾಹುಲ್ ಪಾಂಡ್ವೆ ಅವರಿಗೆ ಸೂಚಿಸಿದರು.
ಭದ್ರತಾ ಸಿಬ್ಬಂದಿ ಮೇಲೆ ಗರಂ: ಆಸ್ಪತ್ರೆ ಕಾವಲಿಗೆ ಇರುವ ಭದ್ರತಾ ಸಿಬ್ಬಂದಿಗಳ ಮೇಲೆ ಜಿಲ್ಲಾಧಿಕಾರಿಗಳು ಇದೇ ಸಂದರ್ಭ ಗರಂ ಆದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಸಿ.ಇ.ೊ. ಡಾ.ಪಿ.ರಾಜಾ, ಜಿಮ್ಸ್ ನಿರ್ದೇಶಕಿ ಡಾ.ಕವಿತಾ ಪಾಟೀಲ್, ವೈದ್ಯಕೀಯ ಅಧೀಕ್ಷಕ ಡಾ.ಶಫಿವುದ್ದಿನ್, ಜಿಲ್ಲಾ ಆಸ್ಪತ್ರೆಯ ಅಧೀಕ್ಷಕ ಡಾ.ಅಂಬಾರಾಯ ರುದ್ರವಾಡಿ, ಪಾಲಿಕೆಯ ಆರೋಗ್ಯ ನಿರೀಕ್ಷಕ ಧನರಾಜ ಇದ್ದರು.







