ಕೋವಿಡ್‍ನಿಂದ ಆರ್ಥಿಕ ಸಂಕಷ್ಟ: ಜಿಮ್ ಮಾಲಕರಿಗೆ ವಿಶೇಷ ಪ್ಯಾಕೇಜ್ ಘೋಷಿಸಲು ಮನವಿ
ಬೆಂಗಳೂರು, ಜು.19: ಕೋವಿಡ್‍ನಿಂದ ಆರ್ಥಿಕ ನಷ್ಟ ಅನುಭವಿಸುತ್ತಿರುವ ಜಿಮ್ ಮತ್ತು ಫಿಟ್ನೆಸ್ ಮಾಲಕರಿಗೆ ವಿಶೇಷ ಪ್ಯಾಕೇಜ್ ಘೋಷಿಸಬೇಕೆಂದು ಜಿಮ್ ಮತ್ತು ಫಿಟ್ನೆಸ್ ಮಾಲಕರ ಸಂಘದ ಅಧ್ಯಕ್ಷ ಎ.ವಿ.ರವಿ ಮನವಿ ಮಾಡಿದ್ದಾರೆ.
ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದ ಅವರು, ಬೆಂಗಳೂರು ನಗರದಲ್ಲಿರುವ ಬಹುತೇಕ ಜಿಮ್ ಮತ್ತು ಫಿಟ್ನೆಸ್ ಸೆಂಟರ್ ಗಳು ಬಾಡಿಗೆ ಕಟ್ಟಡದಲ್ಲಿವೆ. ಹೀಗಾಗಿ ಲಾಕ್‍ಡೌನ್‍ನಿಂದಾಗಿ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದು, ಬಾಡಿಗೆ ಹಾಗೂ ವಿದ್ಯುತ್ ಬಿಲ್ ಕಟ್ಟಲಾಗದ ದುಸ್ಥಿತಿಗೆ ಜಿಮ್ ಮಾಲಕರು ತಲುಪಿದ್ದಾರೆ.
ಇಲ್ಲಿಯವರೆಗೂ ಫಿಟ್ನೆಸ್ ಸೆಂಟರ್ ಗಳು ಸಾರ್ವಜನಿಕರ ಆರೋಗ್ಯಕ್ಕೆ ಸಂಬಂಧಪಟ್ಟಂತೆ ಸಾಕಷ್ಟು ಕೆಲಸ ಮಾಡಿವೆ. ಆದರೆ, ಕೊರೋನ ಲಾಕ್‍ಡೌನ್‍ನಿಂದಾಗಿ ಬಾಡಿಗೆ ಕಟ್ಟಲಾಗದೆ, ಮನೆಯನ್ನು ನಿರ್ವಹಿಸಲಾಗದೆ ನಮ್ಮ ಆರೋಗ್ಯ ಕೆಡುತ್ತಿದೆ. ಹೀಗಾಗಿ ರಾಜ್ಯ ಸರಕಾರ ಇತರೆ ಸಮುದಾಯಗಳಿಗೆ ನೀಡಿದ ವಿಶೇಷ ಪ್ಯಾಕೇಜ್ ಸೌಲಭ್ಯವನ್ನು ನಮಗೂ ನೀಡಬೇಕು.
ಹಲವು ಕ್ಷೇತ್ರಗಳಿಗೆ ಲಾಕ್‍ಡೌನ್‍ನಿಂದ ವಿನಾಯಿತಿ ಸಿಕ್ಕಿದೆ. ಆದರೆ, ಫಿಟ್ನೆಸ್ ಸೆಂಟರ್ ಗಳಿಗೆ ಮಾತ್ರ ಅನುಮತಿ ನೀಡಿಲ್ಲ. ಕೊರೋನ ನಿಯಂತ್ರಿಸುವುದಕ್ಕೆ ಸರಕಾರದೊಂದಿಗೆ ನಾವು ಕೈ ಜೋಡಿಸುತ್ತೇವೆ. ಆದರೆ, ಕೋವಿಡ್ ಸಂಕಷ್ಟದ ಸಮಯದಲ್ಲಿ ನಮಗೆ ಸರಕಾರದ ನೆರವು ಅಗತ್ಯವಿದೆ ಎಂದು ಅವರು ಹೇಳಿದ್ದಾರೆ.







