ಉಡುಪಿಯಲ್ಲಿ ಐದು ಕೋವಿಡ್ ಕೇರ್ ಸೆಂಟರ್ಗಳ ಆರಂಭ
1200 ಬೆಡ್ಗಳ ವ್ಯವಸ್ಥೆ: ಲಕ್ಷಣಗಳಿಲ್ಲದ ಸೋಂಕಿತರಿಗೆ ಚಿಕಿತ್ಸೆ

ಸಾಂದರ್ಭಿಕ ಚಿತ್ರ
ಉಡುಪಿ, ಜು.19: ಜಿಲ್ಲೆಯಲ್ಲಿ ಕೋವಿಡ್-19 ಸೋಂಕು ವ್ಯಾಪಕವಾಗಿ ಹರಡುತ್ತಿರುವುದರಿಂದ ಪ್ರತಿದಿನ ಹೆಚ್ಚು ಹೆಚ್ಚು ಪ್ರಕರಣಗಳು ವರದಿಯಾಗುತ್ತಿವೆ. ಈ ಹಿನ್ನೆಲೆಯಲ್ಲಿ ಕೋವಿಡ್-19 ಆಸ್ಪತ್ರೆಗಳನ್ನು ಹೊರತುಪಡಿಸಿ, ರೋಗದ ಲಕ್ಷಣಗಳಿಲ್ಲದ ಸೋಂಕಿತರಿಗೆ ಚಿಕಿತ್ಸೆ ನೀಡಲು ಜಿಲ್ಲೆಯ ಐದು ಕಡೆಗಳಲ್ಲಿ ಕೋವಿಡ್ ಕೇರ್ ಸೆಂಟರ್ಗಳನ್ನು ಆರಂಭಿಸಲಾಗಿದೆ.
ಮಣಿಪಾಲ ಎಂಐಟಿಯ ಹಾಸ್ಟೆಲ್, ಕುಂದಾಪುರದ ಹಳೆಯ ಆದರ್ಶ ಆಸ್ಪತ್ರೆ, ಕಾರ್ಕಳ ಭುವನೇಂದ್ರ ಕಾಲೇಜಿನ ಹಾಸ್ಟೆಲ್ ಸೇರಿದಂತೆ ಒಟ್ಟು ಐದು ಕೇಂದ್ರಗಳಲ್ಲಿ ಕೋವಿಡ್ ಕೇರ್ ಸೆಂಟರ್ಗಳನ್ನು ತೆರೆಯಲಾಗಿದ್ದು, ಇಲ್ಲಿ 1200 ಬೆಡ್ಗಳ ವ್ಯವಸ್ಥೆ ಮಾಡಲಾಗಿದೆ. ಈಗಾಗಲೇ ರೋಗದ ಲಕ್ಷಣಗಳಿಲ್ಲದ ಸುಮಾರು 100ಕ್ಕೂ ಅಧಿಕ ಸೋಂಕಿತರನ್ನು ಈ ಸೆಂಟರ್ಗಳಲ್ಲಿ ದಾಖಲಿಸಿಕೊಳ್ಳಲಾಗಿದೆ.
40 ಮಂದಿ ಹೋಮ್ ಐಸೋಲೇಶನ್
ರೋಗ ಲಕ್ಷ್ಮಣಗಳಿಲ್ಲದ ಸೋಂಕಿತರಿಗೆ ಹೋಮ್ ಐಸೋಲೇಶನ್ ವ್ಯವಸ್ಥೆ ಕೂಡ ಜಿಲ್ಲೆಯಲ್ಲಿ ಆರಂಭಿಸಲಾಗಿದ್ದು, ಈಗಾಗಲೇ ಸುಮಾರು 40 ಮಂದಿ ಈ ರೀತಿ ಮನೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದಾರೆ. ಮನೆಯಲ್ಲಿ ಸೂಕ್ತವಾದ ವ್ಯವಸ್ಥೆ ಇಲ್ಲದಿದ್ದರೆ ಅಂತಹವರನ್ನು ಈ ಕೇರ್ ಸೆಂಟರ್ಗಳಲ್ಲಿ ದಾಖಲಿಸಲಾಗುತ್ತದೆ.
ಪ್ರತಿ ಕೇರ್ ಸೆಂಟರ್ಗಳಲ್ಲಿ ಒಬ್ಬರು ವೈದ್ಯರು ಹಾಗೂ ಒಬ್ಬರು ನರ್ಸ್ನ್ನು ನಿಯೋಜಿಸಲಾಗಿದ್ದು, ವೈದ್ಯರು ದಿನಕ್ಕೆ ಎರಡು ಬಾರಿ ರೋಗಿಗಳನ್ನು ಪರೀಕ್ಷೆ ಮಾಡುತ್ತಾರೆ. ಲಕ್ಷಣಗಳಿರುವ ಕೊರೋನ ಸೋಂಕಿತರಿಗೆ ಉಡುಪಿಯ ಟಿ.ಎಂ.ಎ.ಪೈ, ಆದರ್ಶ ಆಸ್ಪತ್ರೆ, ಅಜ್ಜರಕಾಡು ಜಿಲ್ಲಾಸ್ಪತ್ರೆ, ಕುಂದಾಪುರದ ಸರಕಾರಿ ಆಸ್ಪತ್ರೆ ಹಾಗೂ ಕಾರ್ಕಳದ ಸರಕಾರಿ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದ್ದಾರೆ.
ಹೆಚ್ಚು ರೋಗದ ಲಕ್ಷಣಗಳಿರುವವರಿಗೆ ಟಿ.ಎಂ.ಎ.ಪೈಯಲ್ಲಿ ಮತ್ತು ಕಡಿಮೆ ಲಕ್ಷ್ಮಣಗಳಿರುವವರಿಗೆ ಉಡುಪಿಯ ಆದರ್ಶ್ ಆಸ್ಪತ್ರೆಯ 30 ಬೆಡ್ಗಳು, ಜಿಲ್ಲಾಸ್ಪತ್ರೆಯ ವಿಶೇಷ ವಾರ್ಡ್ನಲ್ಲಿ ಮತ್ತು ಕುಂದಾಪುರ ಹಾಗೂ ಕಾರ್ಕಳ ಸರಕಾರಿ ಆಸ್ಪತ್ರೆಯಲ್ಲಿ ದಾಖಲಿಸಿಕೊಳ್ಳಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.
15 ವೆಂಟಿಲೇಟರ್ಗೆ ಪ್ರಸ್ತಾವ
ಕೋವಿಡ್ ಚಿಕಿತ್ಸೆ ಸಂಬಂಧ ಜಿಲ್ಲೆಯಲ್ಲಿ ಈಗಾಗಲೇ 15 ವೆಂಟಿಲೇಟರ್ ಬಂದಿದ್ದು, ಇನ್ನು 15 ವೆಂಟಿಲೇಟರ್ಗಾಗಿ ರಾಜ್ಯ ಸರಕಾರಕ್ಕೆ ಜಿಲ್ಲಾಡಳಿತ ಪ್ರಸ್ತಾಪ ಕಳುಹಿಸಿದೆ. ಸದ್ಯ ಜಿಲ್ಲೆಯಲ್ಲಿ ವೆಂಟಿಲೇಟರ್ಗಳ ಕೊರತೆ ಇಲ್ಲ. ಕಾರ್ಕಳ ಮತ್ತು ಕುಂದಾಪುರ ಸರಕಾರಿ ಕೋವಿಡ್ ಆಸ್ಪತ್ರೆಗೂ ವೆಂಟಿಲೇಟರ್ ವ್ಯವಸ್ಥೆ ಮಾಡ ಲಾಗಿದೆ. ಎಲ್ಲರು ಟಿ.ಎಂ.ಎ.ಪೈ ಆಸ್ಪತ್ರೆಯಲ್ಲಿ ಚಿಕಿತ್ಸೆ ಬೇಕು ಎಂದು ಕೇಳುತ್ತಿರುವುದರಿಂದ ಸಮಸ್ಯೆಯಾಗುತ್ತಿದೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದ್ದಾರೆ.
ಜಿಲ್ಲೆಗೆ ಈಗಾಗಲೇ ನಿಟ್ಟೆಯುವರು ನಾಲ್ಕು, ಇನ್ಪೋಸಿಸ್ನವರು ಮೂರು ಹಾಗೂ ಜಿಲ್ಲಾಡಳಿತದಿಂದ ಎರಡು ಖರೀದಿಸಲಾಗಿದೆ. ಟಿ.ಎಂ.ಎ.ಪೈಯಲ್ಲಿ 11 ವೆಂಟಿಲೇಟರ್ ವ್ಯವಸ್ಥೆ ಇದೆ. ನಾಳೆಯಿಂದ ಕೆಎಂಸಿಯಲ್ಲಿ 200 ಬೆಡ್ಗಳು ಸಿದ್ಧಗೊಳ್ಳಲಾಗುತ್ತಿದೆ. ಖಾಸಗಿ ಆದರ್ಶ್ ಆಸ್ಪತ್ರೆಯಲ್ಲೂ ವ್ಯವಸ್ಥೆ ಮಾಡಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
‘ಜಿಲ್ಲೆಯಲ್ಲಿ ಕೊರೋನ ಸೋಂಕಿತರಿಗೆ ಚಿಕಿತ್ಸೆ ನೀಡಲು ಎಲ್ಲ ರೀತಿಯ ಸಿದ್ಧತೆಗಳನ್ನು ಮಾಡಲಾಗಿದೆ. ಖಾಸಗಿ ಆಸ್ಪತ್ರೆ ಹಾಗೂ ಹಾಸ್ಟೆಲ್ಗಳು ಸಹಿತ ಒಟ್ಟು ಸುಮಾರು 2800 ಬೆಡ್ಗಳನ್ನು ಗುರುತಿಸಲಾಗಿದೆ. ಹೊರ ಜಿಲ್ಲೆಗಳಿಂದ ಶ್ವಾಸಕೋಶದ ತೊಂದರೆ ಪ್ರಕರಣಗಳನ್ನು ಪಡೆದುಕೊಳ್ಳದಂತೆ ಖಾಸಗಿ ಆಸ್ಪತ್ರೆಗಳಿಗೆ ಸೂಚನೆ ನೀಡಲಾಗಿದೆ. ಇದರಿಂದ ಜಿಲ್ಲೆಯ ರೋಗಿಗಳಿಗೆ ಸಮಸ್ಯೆಯಾಗಬಹುದು. ನಮ್ಮಲ್ಲಿ ಶೇ.20ರಷ್ಟು ಪಾಸಿಟಿವ್ ಪ್ರಕರಣಗಳು ಪ್ರಾಥಮಿಕ ಸಂಪರ್ಕದಿಂದ ಬರುತ್ತಿದೆ.
-ಜಿ.ಜಗದೀಶ್, ಜಿಲ್ಲಾಧಿಕಾರಿ, ಉಡುಪಿ.







