ದ.ಕ. ಜಿಲ್ಲೆಯಲ್ಲಿ ಮತ್ತೆ 285 ಮಂದಿಗೆ ಕೊರೋನ ಪಾಸಿಟಿವ್: ಸೋಂಕಿತರ ಸಂಖ್ಯೆ 3,596ಕ್ಕೆ ಏರಿಕೆ

ಮಂಗಳೂರು, ಜು.19: ದ.ಕ. ಜಿಲ್ಲೆಯಲ್ಲಿ ಮತ್ತೆ 285 ಮಂದಿಗೆ ಕೊರೋನ ಸೋಂಕು ದೃಢಪಟ್ಟಿದೆ. ಇದರೊಂದಿಗೆ ಜಿಲ್ಲೆಯಲ್ಲಿ ಸೋಂಕಿತರ ಒಟ್ಟು ಸಂಖ್ಯೆ 3,596ಕ್ಕೆ ಏರಿಕೆಯಾಗಿದೆ. ಅಲ್ಲದೆ, ಕೋವಿಡ್‌ಗೆ ಮತ್ತೆ ಇಬ್ಬರು ಬಲಿಯಾಗಿದ್ದಾರೆ.
ಹೊಸದಾಗಿ ಪತ್ತೆಯಾದ ಪ್ರಕರಣಗಳಲ್ಲಿ ತೀವ್ರ ಉಸಿರಾಟ ಸಮಸ್ಯೆ (ಸಾರಿ) ಮತ್ತು ಶೀತ (ಐಎಲ್‌ಐ) ಪ್ರಕರಣಗಳು ಹೆಚ್ಚಿದ್ದು, ಸೋಂಕು ಮೂಲ ಪತ್ತೆಯಾಗದ ಪ್ರಕರಣಗಳು ಕೂಡ 60ಕ್ಕೂ ಹೆಚ್ಚಿವೆ. ಸೋಂಕಿತರ ಪ್ರಾಥಮಿಕ ಸಂಪರ್ಕದಿಂದಲೂ ಅನೇಕರಿಗೆ ಸೋಂಕು ಹರಡಿದ್ದು, ಇಂಥವರ ಸಂಪರ್ಕದಲ್ಲಿರುವವರ ಪರೀಕ್ಷೆ ನಡೆಸಲು ಉದ್ದೇಶಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
104 ಗುಣಮುಖ: ಆಶಾದಾಯಕ ಬೆಳವಣಿಗೆಯಲ್ಲಿ ವಿವಿಧ ಆಸ್ಪತ್ರೆ, ಆರೈಕೆ ಕೇಂದ್ರಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 104 ಮಂದಿ ಗುಣಮುಖರಾಗಿ ಮನೆಗೆ ಮರಳಿದ್ದಾರೆ. ಇದರೊಂದಿಗೆ ಒಟ್ಟು ಗುಣಮುಖರಾದವರ ಸಂಖ್ಯೆ 1491ಕ್ಕೆ ಏರಿದೆ. 2,028 ಮಂದಿ ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕೋವಿಡ್‌ಗೆ ಇಬ್ಬರು ಬಲಿ: ದ.ಕ. ಜಿಲ್ಲೆಯಲ್ಲಿ ರವಿವಾರ ಇಬ್ಬರು ಕೊರೋನ ಸೋಂಕಿಗೆ ಬಲಿಯಾಗಿದ್ದಾರೆ. ಈ ಮೂಲಕ ಮೃತಪಟ್ಟವರ ಸಂಖ್ಯೆ 77ಕ್ಕೆ ಏರಿಕೆಯಾಗಿದೆ. ಇದರಲ್ಲಿ 12 ಮಂದಿ ಹೊರ ಜಿಲ್ಲೆಯವರು.
ರವಿವಾರ ಸಾವಿಗೀಡಾದವರಲ್ಲಿ ವೃದ್ಧೆ ಹಾಗೂ ಪುರುಷರಿದ್ದಾರೆ. ಮೃತರಲ್ಲಿ ಮಂಗಳೂರಿನ ನಿವಾಸಿ 77 ವರ್ಷದ ವೃದ್ಧೆಯು ಕ್ಯಾನ್ಸರ್, ಅಸ್ತಮಾ, ಸಂಧಿವಾತ ಕಾಯಿಲೆಯಿಂದ ಬಳಲುತ್ತಿದ್ದರು. ಮಂಗಳೂರಿನ ಮತ್ತೋರ್ವ ನಿವಾಸಿ 53 ವರ್ಷದ ಪುರುಷ ಅನಿಯಂತ್ರಿತ ಡಯಾಬಿಟಿಸ್ ಸೇರಿದಂತೆ ವಿವಿಧ ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದರು. ಚಿಕಿತ್ಸೆಗೆ ಸ್ಪಂದಿಸದೇ ಇಬ್ಬರೂ ಮೃತಪಟ್ಟಿದ್ದಾರೆ ಎಂದು ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್ ತಿಳಿಸಿದ್ದಾರೆ.








