‘ಜಾಮಿಯಾ ವಿವಿಯಿಂದ ಅಸಾಧಾರಣ ಸಾಧನೆ’ ಎಂದ ಕೇಂದ್ರ ಸಚಿವಾಲಯದ ಮೌಲ್ಯಮಾಪನ: ವಿವಿಯ ಹೇಳಿಕೆ

ಹೊಸದಿಲ್ಲಿ, ಜು.19: ಕೇಂದ್ರ ಮಾನವಸಂಪನ್ಮೂಲ ಅಭಿವೃದ್ಧಿ ಇಲಾಖೆ 2019-20ರ ಶೈಕ್ಷಣಿಕ ವರ್ಷಕ್ಕೆ ಸಂಬಂಧಿಸಿ ನಡೆಸಿದ ಕೇಂದ್ರ ವಿವಿಗಳ ಮೌಲ್ಯಮಾಪನದಲ್ಲಿ ಜಾಮಿಯಾ ವಿವಿಯ ಸಾಧನೆಯನ್ನು ಅಸಾಧಾರಣ ಎಂದು ವಿಶ್ಲೇಷಿಸಿರುವುದಾಗಿ ವಿವಿಯ ಹೇಳಿಕೆ ತಿಳಿಸಿದೆ.
ಸಮಗ್ರ ಮೌಲ್ಯಮಾಪನದಲ್ಲಿ ಜಾಮಿಯಾ ಮಿಲ್ಲಿಯಾ ವಿವಿ 95.23% ಅಂಕ ಗಳಿಸಿರುವುದಾಗಿ ಮಾನವಸಂಪನ್ಮೂಲ ಅಭಿವೃದ್ಧಿ ಇಲಾಖೆ(ಎಚ್ಆರ್ಡಿ) ಯ ಪತ್ರದಲ್ಲಿ ತಿಳಿಸಲಾಗಿದೆ. ಆಯ್ದ ಪ್ರಮುಖ ಮಾನದಂಡಗಳು ಹಾಗೂ ನಿಗದಿಗೊಳಿಸಿದ ಗುರಿಯಲ್ಲಿ ವಿವಿಗಳ ಸಾಧನೆಯನ್ನು ಮೌಲ್ಯಮಾಪನಗೊಳಿಸುವ ಈ ಪ್ರಕ್ರಿಯೆಯಲ್ಲಿ, ಕೇಂದ್ರ ವಿವಿಗಳು ವಿವಿ ಧನಸಹಾಯ ಆಯೋಗ(ಯುಜಿಸಿ) ಮತ್ತು ಕೇಂದ್ರ ಮಾನವ ಸಂಪನ್ಮೂಲ ಇಲಾಖೆಯೊಂದಿಗೆ ಎಂಒಯು(ಮೆಮೊರಾಂಡಮ್ ಆಫ್ ಅಂಡರ್ಸ್ಟಾಂಡಿಂಗ್)ಗೆ ಸಹಿ ಹಾಕಬೇಕು. ಜಾಮಿಯಾ ವಿವಿ ಎಂಒಯುಗೆ ಸಹಿ ಹಾಕಿದ ಪ್ರಥಮ ವಿವಿಯಾಗಿದೆ.
ವಿದ್ಯಾರ್ಥಿ ವೈವಿಧ್ಯತೆ ಮತ್ತು ಸರ್ವಸಮತೆ, ಬೋಧಕವರ್ಗದ ಗುಣಮಟ್ಟ ಮತ್ತು ಸಾಮರ್ಥ್ಯ, ಶೈಕ್ಷಣಿಕ ಫಲಿತಾಂಶ, ಸಂಶೋಧನಾ ಸಾಧನೆ, ಆಡಳಿತ, ಆರ್ಥಿಕ ಮಟ್ಟ, ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ರ್ಯಾಂಕಿಂಗ್(ದರ್ಜೆ), ಮಾನ್ಯತೆ, ಸಹಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳನ್ನು ಮಾನದಂಡವಾಗಿ ಬಳಸಲಾಗುತ್ತದೆ. ರಾಷ್ಟ್ರೀಯ ಸಾಂಸ್ಥಿಕ ಕಳೆದ ತಿಂಗಳು ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆ ಬಿಡುಗಡೆಗೊಳಿಸಿದ ಶ್ರೇಯಾಂಕ ಸಂರಚನೆ ಶ್ರೇಯಾಂಕದಲ್ಲಿ ಜಾಮಿಯಾ ವಿವಿ 10ನೇ ಶ್ರೇಯಾಂಕ ಪಡೆದಿದೆ. ಸಮಗ್ರ ವಿಭಾಗದಲ್ಲಿ ವಿವಿ 16ನೇ ಸ್ಥಾನದಲ್ಲಿದೆ ಎಂದು ವರದಿ ತಿಳಿಸಿದೆ.







