ಹಿರಿಯ ಬಹುಭಾಷಾ ನಟಿ ಶಾಂತಮ್ಮ ನಿಧನ

ಬೆಂಗಳೂರು, ಜು.19: ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಬಹುಭಾಷಾ ಪೋಷಕ ನಟಿ ಶಾಂತಮ್ಮ(95) ಮೈಸೂರಿನಲ್ಲಿ ನಿಧನರಾಗಿದ್ದಾರೆ.
ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಅವರಿಗೆ ಇಂದು ಬೆಳಗ್ಗೆ ಎದೆನೋವು ತೀವ್ರಗೊಂಡಿತ್ತು. ನಗರದ ಕಾವೇರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಂಜೆ ಕೊನೆಯುಸಿರೆಳೆದಿದ್ದಾರೆ. ಕೋವಿಡ್-19ಸ್ವಾಬ್ ಟೆಸ್ಟ್ ಸೇರಿದಂತೆ ಹಲವು ವರದಿಗಳು ಬರಬೇಕಿದೆ. ಆ ಬಳಿಕ ನಾಳೆ ಅಂತ್ಯಕ್ರಿಯೆ ನಡೆಸಲಾಗುವುದೆಂದು ಕುಟುಂಬದ ಸದಸ್ಯರು ತಿಳಿಸಿದ್ದಾರೆ.
ಸುಮಾರು 400ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿರುವ ಪೋಷಕ ನಟಿ ಶಾಂತಮ್ಮ, ಕನ್ನಡ, ತೆಲುಗು, ತಮಿಳು, ಮಲಯಾಳಂ ಸಿನೆಮಾಗಳಲ್ಲಿ ಅಭಿನಯಿಸುವ ಮೂಲಕ ದಕ್ಷಿಣ ಭಾರತದಲ್ಲಿ ಜನಪ್ರಿಯ ನಟಿಯಾಗಿ ಹೆಸರು ಮಾಡಿದ್ದರು.
ನೂರಾರು ಚಲನಚಿತ್ರಗಳಲ್ಲಿ ಪೋಷಕ ನಟಿಯಾಗಿ ಅಭಿನಯಿಸಿ ಜನಮನ ಗೆದ್ದಿದ್ದ ಹಿರಿಯ ಕಲಾವಿದೆ ಶಾಂತಮ್ಮ ಅವರ ಅಗಲಿಕೆ ಬಹಳ ದುಃಖಕರ. ಈ ನೋವು ಸಹಿಸುವ ಶಕ್ತಿಯನ್ನು ಭಗವಂತ ಅವರ ಕುಟುಂಬದ ಸದಸ್ಯರಿಗೆ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ.
-ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ





