ಕೊರೋನ ಸೋಂಕು ನಿಯಂತ್ರಣ ಪರಿಶೀಲಿಸಲು ಬಿಹಾರಕ್ಕೆ ಆಗಮಿಸಿದ ಕೇಂದ್ರದ ತಂಡ

ಪಾಟ್ನಾ, ಜು. 19: ಕೊರೋನ ಸೋಂಕು ಹರಡುವುದನ್ನು ನಿಯಂತ್ರಿಸಲು ರಾಜ್ಯ ಸರಕಾರ ಕೈಗೊಂಡ ಕ್ರಮಗಳ ಬಗ್ಗೆ ಪರಿಶೀಲಿಸಲು ಕೇಂದ್ರ ಸರಕಾರದ ತಂಡ ರವಿವಾರ ಬಿಹಾರಕ್ಕೆ ಭೇಟಿ ನೀಡಿದೆ.
ನಿತೀಶ್ ಕುಮಾರ್ ನೇತೃತ್ವದ ಸರಕಾರ ಕೊರೋನ ಸೊಂಕು ನಿಯಂತ್ರಿಸುವುದರಲ್ಲಿ ವಿಫಲವಾಗುತ್ತಿದೆ ಎಂಬ ಆರೋಪದ ನಡುವೆ ಜಂಟಿ ಕಾರ್ಯದರ್ಶಿ ಲವ್ ಅಗರ್ವಾಲ್ ನೇತೃತ್ವದ ಮೂವರು ಸದಸ್ಯರ ತಂಡ ಇಲ್ಲಿಗೆ ಭೇಟಿ ನೀಡಿದೆ.
ಸರಕಾರಿ ಆಸ್ಪತ್ರೆಗಳಲ್ಲಿ ನಿರ್ಲಕ್ಷ್ಯ ಹಾಗೂ ಸಾಕಷ್ಟು ಸೌಲಭ್ಯ ಇಲ್ಲದೇ ಇರುವ ಬಗ್ಗೆ ಜನರು ಆರೋಪಿಸುತ್ತಿರುವ ಹಲವು ವೀಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ. ಕಟಿಹಾರ್ ಆಸ್ಪತ್ರೆಯಲ್ಲಿ ಸಿಬ್ಬಂದಿ ಆಕ್ಸಿಜನ್ ಪೂರೈಸಲು ವಿಫಲವಾದ ಬಳಿಕ ಕೊರೋನ ಸೋಂಕಿತನೋರ್ವ ಮೃತಪಟ್ಟಿದ್ದ. ಕೊರೋನಾ ಬಿಕ್ಕಟ್ಟನ್ನು ನಿರ್ವಹಿಸುತ್ತಿರುವ ಬಗ್ಗೆ ಆರ್ ಜೆಡಿ ನಾಯಕ ತೇಜಸ್ವಿ ಯಾದವ್ ಅವರು ನಿತೀಶ್ ಕುಮಾರ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಸಿವಾನ್ ನ ಆಸ್ಪತ್ರೆಯಲ್ಲಿ ವೈದ್ಯರು ಹಾಗೂ ನರ್ಸ್ ಗಳ ಕೊರತೆ ಇರುವ ಬಗ್ಗೆ ಜನರು ದೂರಿರುವ ವೀಡಿಯೊವನ್ನು ಅವರು ಹಂಚಿಕೊಂಡಿದ್ದಾರೆ. ಆಸ್ಪತ್ರೆಯ ಬೆಡ್ ಒಂದರಲ್ಲಿ ಮಹಿಳೆಯೋರ್ವರು ಮಲಗಿರುವುದು ಹಾಗೂ ಅವರನ್ನು ನೋಡಿಕೊಳ್ಳುತ್ತಿರುವವರು ಸಹಾಯಕ್ಕಾಗಿ ಯಾಚಿಸುತ್ತಿರುವುದು ವೀಡಿಯೊದಲ್ಲಿ ದಾಖಲಾಗಿದೆ.
‘‘ನಮ್ಮನ್ನು ನೋಡಿಕೊಳ್ಳಲು ವೈದ್ಯರೇ ಇಲ್ಲ. ಅವರು ಆಗಮಿಸಿ ಇಂಜೆಕ್ಷನ್ ನೀಡಿ ತೆರಳಿದರು’’ ಎಂದು ಹೇಳುವುದು ವೀಡಿಯೊದಲ್ಲಿ ಕೇಳಿ ಬಂದಿದೆ. ಈ ವಾರ್ಡ್ ನಲ್ಲಿ ಎಲ್ಲ ಬೆಡ್ ಗಳು ಖಾಲಿ ಆಗಿವೆ.





