ಮುರುಗನ್ ಕುರಿತು ಆಕ್ಷೇಪಾರ್ಹ ವೀಡಿಯೊ ಅಪ್ಲೋಡ್ ಇಬ್ಬರು ಪೆರಿಯಾರ್ವಾದಿ ಹೋರಾಟಗಾರರ ಬಂಧನ

ಚೆನ್ನೈ, ಜು.19: ಮುರುಗನ್ ಬಗ್ಗೆ ಆಕ್ಷೇಪಾರ್ಹ ವೀಡಿಯೋ ಅಪ್ಲೋಡ್ ಮಾಡಿದ ಆರೋಪದಲ್ಲಿ ತಮಿಳುನಾಡಿನ ಇಬ್ಬರು ಹೋರಾಟಗಾರರನ್ನು ಪೊಲೀಸರು ಬಂಧಿಸಿದ್ದಾರೆ.
ಮುರುಗನ್ ಸ್ತುತಿಸಲು 1820ರಲ್ಲಿ ರಚಿಸಲಾದ ಹಿಂದೂ ಭಕ್ತಿ ಗೀತೆ ‘ಕಂಧ ಸಷ್ಠಿ ಕವಸಂ’ ಅನ್ನು ಲೇವಡಿ ಮಾಡಿ ‘‘ಕರುಪ್ಪರ್ ಕೂಟಂ’’ ಎಂದು ಕರೆಯಲಾಗುವ ಗುಂಪೊಂದು ತಮ್ಮ ಯುಟ್ಯೂಬ್ ಚಾನೆಲ್ ನಲ್ಲಿ ವೀಡಿಯೊ ಒಂದನ್ನು ಅಪ್ಲೋಡ್ ಮಾಡಿತ್ತು. ತಮಿಳಿನಲ್ಲಿ ಜನಪ್ರಿಯವಾಗಿರುವ ಈ ಹಾಡನ್ನು ಲಯಬದ್ಧವಾಗಿ ಹಾಡಲಾಗುತ್ತದೆ ಹಾಗೂ ಸುಬ್ರಹ್ಮಣ್ಯನಿಂದ ಆಶೀರ್ವಾದವನ್ನು ಬೇಡಲಾಗುತ್ತದೆ. ಮಾನವನ ದೇಹದ ಎಲ್ಲ ಅವಯವಗಳಿಗೆ ಮುರುಗನ್ ಚಿನ್ನದ ಈಟಿಯ ರಕ್ಷಣೆ ನೀಡುವಂತೆ ಪ್ರಾರ್ಥಿಸಲಾಗುತ್ತದೆ. ಈ ಹಾಡಿನಲ್ಲಿ ಮಾನವನ ಗುಪ್ತಾಂಗವನ್ನು ರಕ್ಷಿಸುವಂತೆ ಕೋರುವ ಸಾಲಿನ ಬಗ್ಗೆ ಚಾನೆಲ್ ಆ್ಯಂಕರ್ ಸುರೇಂದ್ರನ್ ಅವಹೇಳನ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಈ ಹಿನ್ನೆಲೆಯಲ್ಲಿ ತಮಿಳುನಾಡು ಬಿಜೆಪಿ ಚೆನ್ನೈ ಪೊಲೀಸರಿಗೆ ಔಪಚಾರಿಕ ದೂರು ಸಲ್ಲಿಸಿತ್ತು. ಪೆರಿಯಾರ್ ವಾದಿ ಗುಂಪು ಉದ್ದೇಶಪೂರ್ವಕವಾಗಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟು ಮಾಡುತ್ತಿದೆ ಹಾಗೂ ವಿಭಿನ್ನ ಗುಂಪುಗಳ ನಡುವೆ ದ್ವೇಷವನ್ನು ಹುಟ್ಟು ಹಾಕುತ್ತಿದೆ ಎಂದು ಆರೋಪಿಸಿತ್ತು. ಈ ಬಗ್ಗೆ ದೂರು ದಾಖಲಿಸಿಕೊಂಡು ಕ್ರೈಮ್ ಬ್ರಾಂಚ್ ಪೊಲೀಸರು ಯುಟ್ಯೂಬ್ ಚಾನೆಲ್ ನಲ್ಲಿ ಆಕ್ಷೇಪಾರ್ಹ ವೀಡಿಯೋ ಅಪ್ಲೋಡ್ ಮಾಡಿದ ಆರೋಪದಲ್ಲಿ ಆ್ಯಂಕರ್ ಸುರೇಂದ್ರನ್ ಹಾಗೂ ಸೆಂಥಿಲ್ ವಾಸನ್ ಎಂಬವರನ್ನು ಬಂಧಿಸಿದ್ದಾರೆ.







