ಮಳೆ, ಚಳಿಗಾಲದಲ್ಲಿ ಕೊರೋನ ಸೋಂಕು ಉಲ್ಬಣ ಸಾಧ್ಯತೆ: ಐಐಟಿ-ಎಐಐಎಂಎಸ್ ಅಧ್ಯಯನ ವರದಿ

ಭುವನೇಶ್ವರ, ಜು.19: ಮಳೆ ಬಿರುಸಾಗಿರುವ ಅವಧಿ ಮತ್ತು ಚಳಿಗಾಲದಲ್ಲಿ ತಾಪಮಾನ ಕುಸಿಯುವುದರಿಂದ ಕೊರೋನ ಸೋಂಕು ಹರಡುವ ವೇಗ ಹೆಚ್ಚಬಹುದು ಎಂದು ಐಐಟಿ ಭುವನೇಶ್ವರ ಹಾಗೂ ಎಐಐಎಂಎಸ್ ಜಂಟಿಯಾಗಿ ನಡೆಸಿರುವ ಅಧ್ಯಯನದ ವರದಿಯಲ್ಲಿ ಹೇಳಲಾಗಿದೆ.
ಸುರಿಯುತ್ತಿರುವ ಮಳೆ, ತಾಪಮಾನದಲ್ಲಿ ಇಳಿಕೆ ಮತ್ತು ಪರಿಸರ ತಂಪಾಗಿರುವುದು ಮತ್ತು ಚಳಿಗಾಲದ ಆಗಮನ ಕೊರೋನ ವೈರಸ್ ಸೊಂಕು ಉಲ್ಬಣಕ್ಕೆ ಅನುಕೂಲವಾದ ಪರಿಸ್ಥಿತಿಯಾಗಿದೆ ಎಂದು ಐಐಟಿ ಭುವನೇಶ್ವರದ ಅಸಿಸ್ಟೆಂಟ್ ಪ್ರೊಫೆಸರ್ ವಿ ವಿನೋಜ್ ನೇತೃತ್ವದಲ್ಲಿ ನಡೆಸಿದ ಅಧ್ಯಯನ ತಿಳಿಸಿದೆ.
‘ಭಾರತದಲ್ಲಿ ಕೋವಿಡ್-19 ಹರಡುವಿಕೆ ಮತ್ತು ತಾಪಮಾನ ಹಾಗೂ ಅದಕ್ಕೆ ಸಂಬಂಧಿಸಿದ ತೇವಾಂಶದ ಮೇಲೆ ಅದರ ಅವಲಂಬನೆ’ ಎಂಬ ಶಿರೋನಾಮೆಯ ವರದಿಯನ್ನು , ಕೊರೋನ ವೈರಸ್ ಉಲ್ಬಣದ ಮಾದರಿ ಮತ್ತು ಎಪ್ರಿಲ್ ನಿಂದ ಜೂನ್ ಅವಧಿಯಲ್ಲಿ 28 ರಾಜ್ಯಗಳಲ್ಲಿ ಕೊರೋನ ಸೋಂಕಿತರ ಪ್ರಮಾಣವನ್ನು ಆಧರಿಸಿ ರೂಪಿಸಲಾಗಿದೆ. ತಾಪಮಾನ ಏರಿಕೆಯಾದರೆ ಕೊರೋನ ಸೋಂಕು ಪ್ರಸರಣ ಪ್ರಮಾಣ ಕಡಿಮೆಯಾಗುತ್ತದೆ ಎಂಬುದು ಅಧ್ಯಯನದಿಂದ ತಿಳಿದುಬಂದಿದೆ ಎಂದು ವಿನೋಜ್ ಹೇಳಿದ್ದಾರೆ.
ತಾಪಮಾನ ಮತ್ತು ಅದಕ್ಕೆ ಸಂಬಂಧಿಸಿದ ಆರ್ದ್ರತೆ (ತೇವಾಂಶ) ಸೋಂಕಿನ ಅಭಿವೃದ್ಧಿ ದರ ಹಾಗೂ ದ್ವಿಗುಣಗೊಳ್ಳುವ ಸಮಯದ ಮೇಲೆ ಗಮನಾರ್ಹ ಪ್ರಭಾವ ಬೀರುತ್ತದೆ. ತಾಪಮಾನದಲ್ಲಿ 1 ಡಿಗ್ರಿ ಸೆಲ್ಶಿಯಸ್ನಷ್ಟು ಏರಿಕೆಯಾದರೆ ಸೋಂಕಿನ ಪ್ರಮಾಣದಲ್ಲಿ 0.99%ದಷ್ಟು ಕಡಿಮೆಯಾಗುತ್ತದೆ ಮತ್ತು ದ್ವಿಗುಣಗೊಳ್ಳುವ ಅವಧಿಯನ್ನು 1.13 ದಿನದಷ್ಟು ಹೆಚ್ಚಿಸುತ್ತದೆ. ಸಾಪೇಕ್ಷ ಆರ್ದ್ರತೆಯ ಹೆಚ್ಚಳವು ಸೋಂಕಿನ ಅಭಿವೃದ್ಧಿ ದರವನ್ನು ಕಡಿಮೆಗೊಳಿಸುತ್ತದೆ ಮತ್ತು ಕೊರೋನವೈರಸ್ ದ್ವಿಗುಣವಾಗುವ ಅವಧಿಯನ್ನು 1.18 ದಿನದಷ್ಟು ಹೆಚ್ಚಿಸುತ್ತದೆ ಎಂದು ವರದಿ ಹೇಳಿದೆ. ಕೊರೋನ ಸೋಂಕಿನ ಪ್ರಸರಣದ ಮೇಲೆ ಸೌರ ವಿಕಿರಣದ ಪ್ರಭಾವದ ಬಗ್ಗೆಯೂ ವಿಶ್ಲೇಷಣೆ ನಡೆಸಲಾಗಿದೆ. ಮುಂಗಾರು ಆರಂಭಕ್ಕೂ ಮುನ್ನ ಈ ಅಧ್ಯಯನ ನಡೆಸಿರುವುದರಿಂದ ಕೊರೋನ ಸೋಂಕಿನ ನಿಖರವಾದ ಪ್ರಭಾವವನ್ನು ದೃಢಪಡಿಸಲು ಹೆಚ್ಚಿನ ಸಂಶೋಧನೆ ಅಗತ್ಯ ಎಂದು ಅಧ್ಯಯನ ತಂಡದಲ್ಲಿದ್ದ ಎಐಐಎಂಎಸ್ ಭುವನೇಶ್ವರದ ಡಾ ಬಿಜಯಿನಿ ಬೆಹರಾ ಹೇಳಿದ್ದಾರೆ.







