ಕೇಂದ್ರ ಸಚಿವ ಶೆಖಾವತ್ ರಾಜೀನಾಮೆಗೆ ಕಾಂಗ್ರೆಸ್ ಆಗ್ರಹ

ಜೈಪುರ, ಜು.19: ರಾಜಸ್ತಾನದ ಕಾಂಗ್ರೆಸ್ ಸರಕಾರವನ್ನು ಉರುಳಿಸುವ ಸಂಚಿನಲ್ಲಿ ಭಾಗಿಯಾಗಿರುವ ಆರೋಪ ಎದುರಿಸುತ್ತಿರುವ ಕೇಂದ್ರ ಸಚಿವ ಗಜೇಂದ್ರಸಿಂಗ್ ಶೆಖಾವತ್ ರಾಜೀನಾಮೆ ನೀಡಬೇಕೆಂದು ಕಾಂಗ್ರೆಸ್ ಆಗ್ರಹಿಸಿದೆ.
ಶೆಖಾವತ್ ಕಾಂಗ್ರೆಸ್ ಶಾಸಕರಿಗೆ ಹಣದ ಆಮಿಷ ಒಡ್ಡಿದ್ದಾರೆ ಎನ್ನಲಾದ ಆಡಿಯೊ ವೈರಲ್ ಆಗಿರುವುದರಿಂದ ಮತ್ತು ರಾಜ್ಯದ ಭ್ರಷ್ಟಾಚಾರ ನಿಗ್ರಹ ದಳ ಅವರ ವಿರುದ್ಧ ಪ್ರಕರಣ ದಾಖಲಿಸಿರುವುದರಿಂದ ಅವರು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು. ಆಡಿಯೊದಲ್ಲಿರುವ ಧ್ವನಿ ತಮ್ಮದಲ್ಲ ಎಂದು ಹೇಳುತ್ತಿರುವ ಸಿಂಗ್, ತಮ್ಮ ಧ್ವನಿಯ ಮಾದರಿಯನ್ನು ಯಾಕೆ ನೀಡುತ್ತಿಲ್ಲ ಎಂದು ಕಾಂಗ್ರೆಸ್ ಮುಖಂಡ ಅಜಯ್ ಮಾಕೆನ್ ಪ್ರಶ್ನಿಸಿದ್ದಾರೆ.
ರಾಜಸ್ತಾನ ಕಾಂಗ್ರೆಸ್ ನ ಬಂಡಾಯ ಶಾಸಕರಿಗೆ ಹರ್ಯಾನ ಮತ್ತು ದಿಲ್ಲಿ ಪೊಲೀಸರು ನೆರವಾಗುತ್ತಿದ್ದಾರೆ. ಬಿಜೆಪಿ ಆಡಳಿತದ ಹರ್ಯಾಣದ ರೆಸಾರ್ಟ್ ನಲ್ಲಿ ಕಾಂಗ್ರೆಸ್ ಬಂಡಾಯ ಶಾಸಕರು ತಂಗಿರುವುದು ಈ ಪ್ರಕರಣದಲ್ಲಿ ಬಿಜೆಪಿಯ ಕೈವಾಡಕ್ಕೆ ಪುಷ್ಟಿ ಒದಗಿಸಿದೆ. ಪ್ರತೀ ಶಾಸಕರಿಗೆ 30ರಿಂದ 35 ಕೋಟಿ ಹಣದ ಆಮಿಷ ಒಡ್ಡಿರುವ ಬಿಜೆಪಿ, ಈ ಕಪ್ಪುಹಣದ ಬಗ್ಗೆ ಮಾಹಿತಿ ನೀಡಬೇಕು. ಚುನಾಯಿತ ಸರಕಾರವನ್ನು ಹಣದ ಬಲದಿಂದ ಉರುಳಿಸುವುದು ಜನಾದೇಶಕ್ಕೆ ಬಗೆದ ದ್ರೋಹ ಮತ್ತು ಪ್ರಜಾಪ್ರಭುತ್ವದ ಕಗ್ಗೊಲೆಯಾಗಿದೆ ಎಂದು ಮಾಕೆನ್ ಹೇಳಿದರು.
ರಾಜಸ್ತಾನದಲ್ಲಿ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಮಾಕೆನ್ ರನ್ನು ವೀಕ್ಷಕರನ್ನಾಗಿ ಕಾಂಗ್ರೆಸ್ ಹೈಕಮಾಂಡ್ ಜೈಪುರಕ್ಕೆ ಕಳುಹಿಸಿದೆ.







