ಜ್ವರ ಬಂದರೆ ಹೆದರದೇ ವೈದ್ಯರನ್ನು ಭೇಟಿಯಾಗಿ ಚಿಕಿತ್ಸೆ ಪಡೆಯಿರಿ: ಭಟ್ಕಳ ಜಮಾಅತ್ ಮುಖಂಡರಿಂದ ಸಾರ್ವಜನಿಕರಲ್ಲಿ ಮನವಿ

ಭಟ್ಕಳ: ಜ್ವರ ಮತ್ತಿತರ ಸಣ್ಣಪುಟ್ಟ ಕಾಯಿಲೆಗಳಿಗೆ ಹೆದರದೆ ವೈದ್ಯರನ್ನು ಭೇಟಿಯಾಗಿ ಚಿಕಿತ್ಸೆ ಪಡೆಯಿರಿ. ರೋಗದ ಲಕ್ಷಣಗಳನ್ನು ಆಧರಿಸಿ ಅವರು ನಿಮಗೆ ಚಿಕಿತ್ಸೆ ಮತ್ತು ಸಲಹೆ ನೀಡುತ್ತಾರೆ. ಇದಕ್ಕಾಗಿ ತಾಲೂಕಾಡಳಿತವೂ ಕೂಡ ಸಹಕಾರ ನೀಡಲಿದೆ ಎಂದು ಭಟ್ಕಳದ ಎರಡು ಜಮಾಅತ್ ನ ಮುಖಂಡರು ಹಾಗೂ ಧಾರ್ಮಿಕ ವಿದ್ವಾಂಸರು ಜಂಟಿ ಪತ್ರಿಕಾಗೋಷ್ಟಿ ನಡೆಸುವುದರ ಮೂಲಕ ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿರುವ ಭಟ್ಕಳ ಮರ್ಕಝಿ ಖಲಿಫಾ ಜಮಾಅತುಲ್ ಮುಸ್ಲಿಮೀನ್ ಪ್ರಧಾನ ಖಾಝಿ ಮೌಲಾನ ಕ್ವಾಜಾ ಮುಹಿದ್ದೀನ್ ಅಕ್ರಮಿ ಮದನಿ, ಕೊರೋನ ಸೋಂಕು ಕುರಿತಂತೆ ಜನರಲ್ಲಿ ಹೆದರಿಕೆಯುಂಟಾಗಿದೆ. ಜ್ವರ ಬಂದರೆ ವೈದ್ಯರಲ್ಲಿ ಹೋಗಲು ಜನರು ಹೆದರುತ್ತಿದ್ದಾರೆ. ಯಾರೂ ಕೂಡ ಹೆದರಬೇಕಾಗಿಲ್ಲ. ತಮ್ಮ ತಮ್ಮ ಕುಟುಂಬದ ವೈದ್ಯರಲ್ಲಿ ಭೇಟಿ ಮಾಡಿ ಚಿಕಿತ್ಸೆ ಪಡೆಯಿರಿ. ಕೊರೋನ ರೋಗದ ಲಕ್ಷಣ ಇದ್ದರೆ ಅವರು ನಿಮಗೆ ಸಲಹೆಯನ್ನು ನೀಡುತ್ತಾರೆ. ಈ ಕುರಿತಂತೆ ಇಲ್ಲಿನ ವಿವಿಧ ಮುಖಂಡರು ಹಾಗೂ ಧಾರ್ಮಿಕ ವಿದ್ವಾಂಸರ ನಿಯೋಗವು ತಾಲೂಕಾಡಳಿತವನ್ನು ಭೇಟಿಯಾಗಿ ಸಾರ್ವಜನಿಕರ ಆತಂಕವನ್ನು ವಿವರಿಸಿದ್ದು, ಅದಕ್ಕೆ ಫ್ಯಾಮಿಲಿ ವೈದ್ಯರಿಗೆ ಚಿಕಿತ್ಸೆ ನೀಡಲು ಅನುಮತಿಯನ್ನು ನೀಡಿದ್ದಾರೆ ಎಂದರು.
ಅಲಿಮಿಯಾ ಅಕಾಡೆಮಿಯ ಪ್ರಧಾನ ಕಾರ್ಯದರ್ಶಿ ಮೌಲಾನ ಮುಹಮ್ಮದ್ ಇಲಿಯಾಸ್ ನದ್ವಿ ಮಾತನಾಡಿ, ಕಳೆದ ಐದಾರು ದಿನಗಳಲ್ಲಿ ಸಾವಿನ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿರುವುದರಿಂದ ಜನರಲ್ಲಿ ಆತಂಕ ಹೆಚ್ಚಾಗಿದೆ. ಆದರೆ ನಾವು ಯಾವುದೇ ಕಾರಣಕ್ಕೂ ಹೆದರಬೇಕಾಗಿಲ್ಲ. ಸೀಸನಲ್ ಜ್ವರ, ನೆಗಡಿ ಕೆಮ್ಮುಗಳಿಂದಾಗಿ ಜನರ ಹೆದರಿಕೊಂಡಿದ್ದಾರೆ. ಇದಕ್ಕಾಗಿ ನಾವು ತಾಲೂಕಾಡಳಿತದೊಂದಿಗೆ ಮಾತುಕತೆ ನಡೆಸಿ ಕುಟುಂಬ ವೈದ್ಯರಿಗೆ ಚಿಕಿತ್ಸೆ ನೀಡಲು ಅನುಮತಿಯನ್ನು ಕೊಡುವಂತೆ ಕೇಳಿಕೊಂಡಿದ್ದು, ಇಲಾಖೆ ಉತ್ತಮವಾಗಿ ಸ್ಪಂದಿಸಿದೆ. ಹಾಗಾಗಿ ಯಾರು ಕೂಡ ಜ್ವರಕ್ಕೆ ಹೆದರಿಕೊಳ್ಳದೆ ತಮ್ಮ ಕುಟುಂಬ ವೈದ್ಯರನ್ನು ಭೇಟಿಯಾಗಿ ಚಿಕಿತ್ಸೆ ಪಡೆದುಕೊಳ್ಳಿ. ಮನೆಯಲ್ಲಿ ಕ್ವಾರೆಂಟೈನ್ ಆಗುವ ಅವಕಾಶವಿದೆ. ಸರ್ಕಾರ ಇದಕ್ಕೂ ಅನುಮತಿಯನ್ನು ನೀಡುತ್ತದೆ. ಒಂದು ವೇಳೆ ಕೊರೊನ ಸೋಂಕು ದೃಡಪಟ್ಟರೆ ಮಾತ್ರ ಸರ್ಕಾರ ನೀಡುವ ಚಿಕಿತ್ಸೆಯನ್ನು ಪಡೆದುಕೊಳ್ಳಬೇಕಾಗುತ್ತದೆ ಎಂದರು.
ಜಮಾಅತುಲ್ ಮುಸ್ಲಿಮೀನ್ ಉಪಖಾಝಿ ಮೌಲಾನ ಅಬ್ದುಲ್ ರಬ್ ನದ್ವಿ, ಮೌಲಾನ ಅಬ್ದುಲ್ ಅಝೀಮ್ ಕಾಝೀಯ ಮತ್ತಿತರರು ಮಾತನಾಡಿದರು.







