ತುಳುನಾಡಿನಲ್ಲಿ ಆಟಿ ಅಮಾವಾಸ್ಯೆ: ಹಾಲೆ ಕಷಾಯಕ್ಕೆ ಭಾರೀ ಬೇಡಿಕೆ

ತುಳು ಸಾಹಿತ್ಯ ಅಕಾಡೆಮಿ ವತಿಯಿಂದ ಆಟಿ ಕಷಾಯ ವಿತರಿಸಲಾಯಿತು
ಮಂಗಳೂರು, ಜು.20: ಆಷಾಡ ಮಾಸದ ಅಮಾವಾಸ್ಯೆಯನ್ನು ತುಳುನಾಡಿನಲ್ಲಿ ಆಟಿ ಅಮಾವಾಸ್ಯೆಯಾಗಿ ಆಚರಿಸುವ ಜತೆಗೆ ಈ ದಿನ ಹಾಲೆ ಮರದ ತೊಗಟೆ ಕಷಾಯವನ್ನು ಬೆಳಗ್ಗಿನ ಹೊತ್ತು ಸೇವಿಸಲಾಗುತ್ತದೆ. ಔಷಧೀಯವಾಗಿ ಈ ಕಷಾಯಕ್ಕೆ ಬಹಳಷ್ಟು ಮಹತ್ವವಿರುವುದರಿಂದ ಈ ಕೊರೋನ ಸೋಂಕಿನ ಹಿನ್ನೆಲೆಯಲ್ಲಿ ಕಷಾಯಕ್ಕೂ ಈ ಬಾರಿ ಭಾರೀ ಬೇಡಿಕೆ ವ್ಯಕ್ತವಾಗಿದೆ.
ಹಿಂದಿನ ಕಾಲದಿಂದಲೂ ತುಳುನಾಡಿನಲ್ಲಿ ಆಟಿ ಅಮಾವಾಸ್ಯೆ ದಿನ ಹಾಲೆ ಮರದ ತೊಗಟೆ ಕಷಾಯ ಕುಡಿಯುವುದು ಸಂಪ್ರದಾಯವಾಗಿ ಬೆಳೆದು ಬಂದಿದೆ. ಕಳೆದ ಕೆಲ ವರ್ಷಗಳಿಂದ ನಗರದಲ್ಲಿಯೂ ಈ ಕಷಾಯವನ್ನು ಸಾಮೂಹಿಕವಾಗಿ ಸೇವಿಸಲಾಗುತ್ತಿತ್ತು. ಈ ಬಾರಿ ಕೊರೋನ ಹಿನ್ನೆಲೆಯಲ್ಲಿ ಸಾಮೂಹಿಕ ಸೇವನೆ ಸಾಧ್ಯವಾಗದಿದ್ದರೂ, ಮನೆಗಳಲ್ಲಿಯೇ ತಯಾರಿಸಿದ ಕಷಾಯಕ್ಕೆ ಅಕ್ಕಪಕ್ಕದವರಿಂದಲೂ ಬೇಡಿಕೆ ವ್ಯಕ್ತವಾಗಿದೆ. ಕಹಿಯಾಗಿರುವ ಈ ಮದ್ದು ರೋಗ ನಿರೋಧಕ ಶಕ್ತಿಯನ್ನೂ ಹೊಂದಿದೆ ಎಂಬ ಕಾರಣಕ್ಕೆ ಈ ಬಾರಿ ಕಾಯಕ್ಕೂ ಹೆಚ್ಚಿನ ಬೇಡಿಕೆ ದೊರಕಿದೆ.
ಆಟಿ ಅಮಾವಾಸ್ಯೆಯ ದಿನದಂದು ದ.ಕ. ಜಿಲ್ಲೆಯಾದ್ಯಂತ ಪ್ರಮುಖ ದೇವಸ್ಥಾನಗಳಲ್ಲಿ ಮುಖ್ಯಾಗಿ ಕಾರಿಂಜ, ಪಾಣೆಮಂಗಳೂರು ಸಮೀಪದ ನರಹರಿ ಪರ್ವತ, ಉಪ್ಪಿನಂಗಡಿಯ ಸಹಸ್ರ ಲಿಂಗೇಶ್ವರ ಕ್ಷೇತ್ರದಲ್ಲಿ ತೀರ್ಥಸ್ನಾನ ಮಾಡುವ ಸಂಪ್ರದಾಯವಿದ್ದರೂ ಕೊರೋನ ಹಿನ್ನೆಲೆಯಲ್ಲಿ ಇಂದು ತೀರ್ಥಸ್ನಾನ ನಡೆಯಲಿಲ್ಲ.












