ಒಡಿಶಾ: ಹಳ್ಳಿಯ ಜನರಿಗೆ ಅಚ್ಚರಿ ಮೂಡಿಸಿದ ಅಪರೂಪದ ಆಮೆ

ಬಾಲಾಸೋರ್, ಜು.20: ಒಡಿಶಾ ರಾಜಧಾನಿ ಭುವನೇಶ್ವರದಿಂದ 196 ಕಿ.ಮೀ.ದೂರದಲ್ಲಿರುವ ಬಾಲಸೋರ್ ಜಿಲ್ಲೆಯ ಹಳ್ಳಿಯ ಜನತೆ ರವಿವಾರ ಒಂದು ಅಪರೂಪದ ದೃಶ್ಯಕ್ಕೆ ಸಾಕ್ಷಿಯಾದರು. ಹಳ್ಳಿಯ ಜನ ಹಳದಿಬಣ್ಣದ ಆಮೆಯನ್ನು ನೋಡಿ ಅಚ್ಚರಿಪಟ್ಟರು.
ಇದೊಂದು ಅಪರೂಪದ ಆಮೆಯಾಗಿದೆ ಎಂದು ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
ರಕ್ಷಿಸಿದ ಆಮೆಯ ಚಿಪ್ಪು ಹಾಗೂ ದೇಹವೆಲ್ಲರೂ ಹಳದಿ ಬಣ್ಣದಿಂದ ಕೂಡಿದೆ. ಇದೊಂದು ಅಪರೂಪದ ಆಮೆ.ಇಂತಹ ಆಮೆಯನ್ನು ನಾನು ಈ ತನಕ ನೋಡಿಯೇ ಇಲ್ಲ ಎಂದು ವನ್ಯಜೀವಿ ವಾರ್ಡನ್ ಭೂನುಮಿತ್ರಾ ಆಚಾರ್ಯ ಎಎನ್‌ಐಗೆ ತಿಳಿಸಿದರು.
ಹಳದಿ ಬಣ್ಣದ ಆಮೆಯನ್ನು ಬಾಲಾಸೋರ್ ಜಿಲ್ಲೆಯ ಸುಜಾನ್‌ಪುರ ಗ್ರಾಮಸ್ಥರು ರವಿವಾರ ರಕ್ಷಿಸಿದ್ದಾರೆ. ಸ್ಥಳೀಯರು ಅರಣ್ಯ ಅಧಿಕಾರಿಗಳನ್ನು ಸ್ಥಳಕ್ಕೆ ಕರೆಸಿಕೊಂಡರು. ಅವರಿಗೆ ಆಮೆಯನ್ನು ಹಸ್ತಾಂತರಿಸಿದರು. ಬಹುಶಃ ಇದೊಂದು ಅಲ್ಬಿನೊ ಆಗಿರಬಹುದು. ಕೆಲವು ವರ್ಷಗಳ ಹಿಂದೆ ಸಿಂಧ್‌ನ ಜನರು ಇಂತಹ ಅಪರೂಪದ ಆಮೆಯನ್ನು ನೋಡಿದ್ದರು ಎಂದು ಭಾರತೀಯ ಅರಣ್ಯ ಸೇವಾಧಿಕಾರಿ ಸುಸಾಂತ್ ನಂದ ಟ್ವಿಟ್‌ನಲ್ಲಿ ಬರೆದಿದ್ದಾರೆ.





