ಅಮೆರಿಕದ ಹೈಸ್ಕೂಲ್ನಲ್ಲಿ ಅಗ್ರಸ್ಥಾನ ಪಡೆದ ಅಲಿಗಢದ ಮೆಕ್ಯಾನಿಕ್ನ ಮಗ ಶಾದಾಬ್

ಮುಹಮ್ಮದ್ ಶಾದಾಬ್
ಅಲಿಗಡ,ಜು.2: ಅಲಿಗಢದ ಮೋಟಾರ್ ಮೆಕ್ಯಾನಿಕ್ನೊಬ್ಬನ ಪುತ್ರ ಅಮೆರಿಕದ ಹೈಸ್ಕೂಲ್ನಲ್ಲಿ ಅಗ್ರಸ್ಥಾನ ಪಡೆದಿದ್ದು, ಈತ ಅಮೆರಿಕ ಸರಕಾರದಿಂದ ವಿದ್ಯಾರ್ಥಿವೇತನ ಪಡೆಯುತ್ತಿದ್ದಾನೆ.
ಮೋಟಾರ್ ಮೆಕ್ಯಾನಿಕ್ ಮಗನಾಗಿರುವ ಮುಹಮ್ಮದ್ ಶಾದಾಬ್ ಎನ್ಎನ್ಐನೊಂದಿಗೆ ಮಾತನಾಡುತ್ತಾ, "ನಾನು ಕಳೆದ ವರ್ಷ ಅಮೆರಿಕ ಸರಕಾರದಿಂದ ಕೆನಡಿ-ಲುಗರ್ ಯೂತ್ ಎಕ್ಸ್ಚೇಂಜ್ ಸ್ಕಾಲರ್ಶಿಪ್ 20 ಲಕ್ಷ ರೂ. ಸ್ವೀಕರಿಸಿದ್ದೆ. ಆ ನಂತರ ಸ್ಟೇಟ್ಸ್ಗೆ ತೆರಳಿ ನನ್ನ ಹೈಸ್ಕೂಲ್ ಶಿಕ್ಷಣವನ್ನು ಮುಂದುವರಿಸಿದ್ದೆ'' ಎಂದರು.
ಶಾದಾಬ್ ತನ್ನ ಶಾಲೆಯಲ್ಲಿ 800 ವಿದ್ಯಾರ್ಥಿಗಳ ಪೈಕಿ ತಿಂಗಳ ವಿದ್ಯಾರ್ಥಿಯಾಗಿಯೂ ಆಯ್ಕೆಯಾಗಿದ್ದರು. ಈ ಸಾಧನೆಯ ಕುರಿತು ಪ್ರತಿಕ್ರಿಯಿಸಿದ ಶಾದಾಬ್, "ಈ ಟ್ಯಾಗ್ಗೆ ಪಾತ್ರವಾಗಿರುವುದು ನನ್ನ ಪಾಲಿಗೆ ಒಂದು ಸಾಧನೆ. ಹೈಸ್ಕೂಲ್ನಲ್ಲಿ ಅಗ್ರಸ್ಥಾನ ಪಡೆಯಲು ನಾನು ಕಠಿಣ ಶ್ರಮಪಟ್ಟಿದ್ದೆ'' ಎಂದರು.
"ಮನೆಯಲ್ಲಿನ ಪರಿಸ್ಥಿತಿ ಚೆನ್ನಾಗಿರಲಿಲ್ಲ. ಈಗಲೂ ಪರಿಸ್ಥಿತಿ ಹಾಗೆಯೇ ಇದೆ. ನಾನು ಹೆತ್ತವರಿಗೆ ಬೆಂಬಲ ನೀಡಿ, ಅವರನ್ನು ಹೆಮ್ಮೆ ಪಡುವಂತೆ ಮಾಡಲು ಬಯಸಿದ್ದೇನೆ'' ಎಂದು ಶಾದಾಬ್ ಹೇಳಿದರು.
ಭಾರತೀಯ ಸರಕಾರಕ್ಕೆ ಕೃತಜ್ಞತೆ ಸಲ್ಲಿಸಿದ ಶಾದಾಬ್, "ನಾನು ಮತ್ತೊಂದು ದೇಶಕ್ಕೆ ಹೋಗಿ ಈ ವಿದ್ಯಾರ್ಥಿವೇತನ ಸ್ವೀಕರಿಸಲು ನೆರವಾಗಿರುವ ಭಾರತಿಯ ಸರಕಾರಕ್ಕೆ ನಾನು ಕೃತಜ್ಞತೆ ಸಲ್ಲಿಸುವೆ''ಎಂದರು.
ಕಳೆದ 25 ವರ್ಷಗಳಿಂದ ಮೋಟಾರ್ ಮೆಕ್ಯಾನಿಕ್ ಆಗಿ ಕೆಲಸ ಮಾಡುತ್ತಿರುವ ಶಾದಾಬ್ ತಂದೆ ಅರ್ಷದ್ ನೂರ್ ಮಗನ ಸಾಧನೆಯ ಬಗ್ಗೆ ಮಾತನಾಡುತ್ತಾ,"ನಾವು ಶಾದಾಬ್ನನ್ನು ವಿದ್ಯಾಭ್ಯಾಸಕ್ಕಾಗಿ ಅಮೆರಿಕಕ್ಕೆ ಕಳುಹಿಸಿಕೊಟ್ಟಿದ್ದೆವು. ಶಾಲೆಗೆ ಉನ್ನತ ಸ್ಥಾನ ಪಡೆದಿರುವ ಮಗನ ಬಗ್ಗೆ ಹೆಮ್ಮೆಯಾಗುತ್ತಿದೆ. ನನ್ನ ಮಗ ಐಎಎಸ್ ಅಧಿಕಾರಿಯಾಗಿ ದೇಶ ಸೇವೆ ಮಾಡುವುದನ್ನು ಇಷ್ಟಪಡುವೆ'' ಎಂದರು.
ವಿಶ್ವಸಂಸ್ಥೆಯಲ್ಲಿ ಮಾನವ ಹಕ್ಕುಗಳ ಅಧಿಕಾರಿಯಾಗುವ ಬಯಕೆ ನನಗಿದೆ ಎಂದು ಶಾದಾಬ್ ಹೇಳಿದ್ದಾರೆ.







