ನಿವೃತ್ತಿ ಬಿಟ್ಟು ಕರ್ತವ್ಯಕ್ಕೆ ಮರಳಿದ ಎನ್95 ಮಾಸ್ಕ್ ಅನ್ವೇಷಕ

ಸಾಂದರ್ಭಿಕ ಚಿತ್ರ
ವಾಷಿಂಗ್ಟನ್ : ಕೋವಿಡ್-19 ಸಮಯದಲ್ಲಿ ಅತ್ಯವಶ್ಯಕವಾಗಿರುವ ಎನ್95 ಮಾಸ್ಕ್ಗಳಲ್ಲಿ ಬಳಸುವ ಫಿಲ್ಟರ್ ನ ಅನ್ವೇಷಕ ಪೀಟರ್ ತ್ಸಾಯಿ ಎಂಬ ತೈವಾನೀಸ್ ಅಮೆರಿಕನ್ ವಿಜ್ಞಾನಿ ತಮ್ಮ ವೃತ್ತಿಯಿಂದ ನಿವೃತ್ತರಾಗಿ ಎರಡು ವರ್ಷಗಳಿಗೂ ಹೆಚ್ಚು ಸಮಯ ಸಂದಿತ್ತು. ಆದರೆ ಯಾವಾಗ ಕೋವಿಡ್-19 ಎಂಬ ಸೋಂಕು ಜಗತ್ತಿನಲ್ಲಿ ಇನ್ನಿಲ್ಲದ ಸಮಸ್ಯೆ ಸೃಷ್ಟಿಸಿತೋ ಪೀಟರ್ ಅವರು ಮತ್ತೆ ತಮ್ಮ ಕರ್ತವ್ಯಕ್ಕೆ ಮರಳಿ ಬಿಟ್ಟಿದ್ದಾರೆ.
ಎನ್95 ಮಾಸ್ಕ್ ಗಳಿಗಾಗಿ ಅಗತ್ಯವಿರುವ ಸಿಂಥೆಟಿಕ್ ಫ್ಯಾಬ್ರಿಕ್ ಅನ್ವೇಷಕರಾಗಿದ್ದಾರೆ ಪೀಟರ್. ಈ ಸಿಂಥೆಟಿಕ್ ಫ್ಯಾಬ್ರಿಕ್ ಕೊರೋನ ವೈರಸ್ ಸೋಂಕು ಹರಡುವಿಕೆ ತಡೆಗಟ್ಟುವಲ್ಲಿ ಅತ್ಯಂತ ಪರಿಣಾಮಕಾರಿ ಎಂದು ಪರಿಗಣಿತವಾಗಿದೆ. ಅಮೆರಿಕಾದಲ್ಲಿ ಕೊರೋನ ವೈರಸ್ ಸೋಂಕು ವ್ಯಾಪಕವಾಗುತ್ತಿದ್ದಂತೆಯೇ ಅವರು ಮಾರ್ಚ್ನಲ್ಲಿ ಮತ್ತೆ ಮಾಸ್ಕ್ ಸ್ಟೆರಿಲೈಝೇಶನ್ ಕೆಲಸವನ್ನು ಆರಂಭಿಸಿದ್ದಾರೆ.
ಎನ್95 ಮಾಸ್ಕ್ ತಯಾರಿಕಾ ತಂತ್ರಜ್ಞಾನದ ಪೇಟೆಂಟ್ ಅನ್ನು ಪೀಟರ್ 1995ರಲ್ಲಿ ಪಡೆದಿದ್ದರು. ಮಾಸ್ಕ್ ಸಂಪರ್ಕಕ್ಕೆ ಬರುವ ಗಾಳಿಯಲ್ಲಿರುವ ಶೇ 95ರಷ್ಟು ವೈರಾಣುಗಳನ್ನು ತಡೆಯಲು ಪೀಟರ್ ಅವರು ಕೊರೋನ ಇಲೆಕ್ಟ್ರೋಸ್ಟೇಟಿಕ್ ಚಾಜಿಂಗ್ ವಿಧಾನ ಬಳಸಿ ಫಿಲ್ಟರ್ ತಯಾರಿಸಿದ್ದರು. ಸರಳವಾಗಿ ಹೇಳಬೇಕೆಂದರೆ ಮಾಸ್ಕ್ ನ ಫಿಲ್ಟರ್ನಲ್ಲಿ ಪಾಸಿಟಿವ್ ಮತ್ತು ನೆಗೆಟಿವ್ ಜಾರ್ಜ್ ಇದ್ದು ಅದು ವೈರಾಣುಗಳಲ್ಲಿರುವ ಬ್ಯಾಕ್ಟೀರಿಯಾ ಸಹಿತ ನ್ಯೂಟ್ರಲ್ ಕಣಗಳನ್ನು ಆಕರ್ಷಿಸಿ ಅವುಗಳು ಮಾಸ್ಕ್ ಮೂಲಕ ಮನುಷ್ಯರ ಶ್ವಾಸಕೋಶ ತಲುಪುವುದಕ್ಕಿಂತ ಮುಂಚೆಯೇ ಅವುಗಳನ್ನು ನಿಷ್ಕ್ರಿಯಗೊಳಿಸುತ್ತದೆ.
ಮಾಸ್ಕ್ ಗಳ ಕೊರತೆಯಿಂದಾಗಿ ವೈದ್ಯರು ಹಾಗೂ ದಾದಿಯರು ಒಮ್ಮೆ ಬಳಸಿದ್ದನ್ನು ಮತ್ತೆ ಮತ್ತೆ ಬಳಸುತ್ತಿದ್ದಾರೆಂದು ತಿಳಿದು ಅವರು ಮತ್ತೆ ತಮ್ಮ ಕೆಲಸ ಮುಂದುವರಿಸಿದ್ದಾರೆ.
ಮಾಸ್ಕ್ ಗಳನ್ನು ಸ್ಟೆರಿಲೈಸ್ ಮಾಡುವ ಹೊಸ ವಿಧಾನಗಳನ್ನು ಕಂಡು ಹಿಡಿಯಲು ಟೆನ್ನೆಸ್ಸೀ ವಿವಿಯ ನೊಕ್ಸ್ವಿಲ್ಲೆ ರಿಸರ್ಚ್ ಫೌಂಡೇಶನ್ನಲ್ಲಿ ಅವರು ದಿನಕ್ಕೆ 20 ಗಂಟೆಗಳಷ್ಟು ದುಡಿಯುತ್ತಿದ್ದಾರೆ.
ಎನ್95 ಅಲ್ಲದೇ ಇದ್ದರೂ ಬೇರೆ ಯಾವುದಾದರೂ ಮಾಸ್ಕ್ ಅನ್ನು ಜನರು ಕಡ್ಡಾಯವಾಗಿ ಧರಿಸಬೇಕೆಂದು ಅವರು ಹೇಳುತ್ತಾರೆ.







