ಒಂದು ರಾಜ್ಯವಾಗಿ ನೀವು ಕಾನೂನನ್ನು ಎತ್ತಿಹಿಡಿಯಬೇಕು: ಉತ್ತರಪ್ರದೇಶ ಸರಕಾರಕ್ಕೆ ಸುಪ್ರೀಂ

ಹೊಸದಿಲ್ಲಿ, ಜು.20: "ರಾಜ್ಯದಲ್ಲಿ ಕಾನೂನನ್ನು ಎತ್ತಿಹಿಡಿಯುವ ಜವಾಬ್ದಾರಿ ಉತ್ತರಪ್ರದೇಶ ಸರಕಾರಕ್ಕೆ ಇದೆ'' ಎಂದು ಗ್ಯಾಂಗ್‌ಸ್ಟರ್ ವಿಕಾಸ್ ದುಬೆ ಹಾಗೂ ಆತನ ಸಹಚರರ ಹತ್ಯೆಗೆ ಸಂಬಂಧಿಸಿದ ಅರ್ಜಿಯ ವಿಚಾರಣೆ ವೇಳೆ ಸುಪ್ರೀಂಕೋರ್ಟ್ ಹೇಳಿದೆ.
ಕಾನೂನು ಎತ್ತಿಹಿಡಿಯುವುದು ನಿಮ್ಮ ಕರ್ತವ್ಯವಾಗಿದೆ ಎಂದ ಮುಖ್ಯನ್ಯಾಯಮೂರ್ತಿ ಎಸ್‌ಎ ಬೋಬ್ಡೆ ಅವರಿದ್ದ ನ್ಯಾಯಪೀಠ, "ಎಲ್ಲ ಕೃತ್ಯವನ್ನು ಮಾಡಿರುವ ವ್ಯಕ್ತಿಯನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ ಎಂಬ ಅಂಶ ನಮ್ಮನ್ನು ದಿಗಿಲುಗೊಳಿಸುತ್ತಿದೆ. ಇದು ಸ್ಪಷ್ಟ ವೈಫಲ್ಯ. ಆ ಎಲ್ಲ ಆದೇಶಗಳ ಸ್ಪಷ್ಟ ವರದಿ ನಮಗೆ ಬೇಕು'' ಎಂದು ಆದೇಶಿಸಿದರು.
ದುಬೆ ಎನ್‌ಕೌಂಟರ್‌ಗೆ ಸಂಬಂಧಿಸಿ ರಚಿಸಲಾಗಿರುವ ಸಮಿತಿಯನ್ನು ಮರು ರಚಿಸಲು ಉತ್ತರಪ್ರದೇಶ ಸರಕಾರ ಒಪ್ಪಿಕೊಂಡಿದೆ. ಪುನರ್‌ರಚಿತ ಸಮಿತಿಯಲ್ಲಿ ನಿವೃತ್ತ ಸುಪ್ರೀಂಕೋರ್ಟ್ ನ್ಯಾಯಾಧೀಶರು ಹಾಗೂ ನಿವೃತ್ತ ಪೊಲೀಸ್ ಅಧಿಕಾರಿಯನ್ನು ಸೇರಿಸಲಾಗಿದೆ.
ಮರು ರಚಿಸಲ್ಪಟ್ಟಿರುವ ಸಮಿತಿಯ ಕರಡು ಪ್ರತಿಯನ್ನು ಸರಕಾರ ಸಲ್ಲಿಸಿದ ಬಳಿಕ ಮುಂದಿನ ವಿಚಾರಣೆಯು ಮುಂದಿನ ತಿಂಗಳು ನಡೆಯಲಿದೆ.





