ಗುರುಪುರ ದುರಂತದ ಸಂತ್ರಸ್ತರಿಗೆ ನಿವೇಶನ: ಜನಪ್ರತಿನಿಧಿಗಳ ಜೊತೆ ಮಂಗಳೂರು ತಹಶೀಲ್ದಾರ್ ಚರ್ಚೆ
ಮಂಗಳೂರು, ಜು.20: ಗುರುಪುರ ಗ್ರಾಪಂ ವ್ಯಾಪ್ತಿಯ ಮಠದಗುಡ್ಡೆ ಮೂಳೂರು ಸೈಟ್ ನಂಬ್ರ 133ರಲ್ಲಿ ಸಂಭವಿಸಿದ ಗುಡ್ಡ ಕುಸಿತದಲ್ಲಿ ಮನೆ ಕಳೆದುಕೊಂಡವರಿಗೆ ಪರಿಹಾರ ನೀಡುವ ಕುರಿತು ಗುರುಪುರ ಗ್ರಾಪಂ ಕಚೇರಿಯಲ್ಲಿ ಮಂಗಳೂರು ತಹಶೀಲ್ದಾರ್ ಗುರುಪ್ರಸಾದ್ ಸೋಮವಾರ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳೊಂದಿಗೆ ಚರ್ಚೆ ನಡೆಸಿದರು.
ಮನೆ ಕಳೆದುಕೊಂಡವರಿಗೆ ಈಗಾಗಲೇ ಬಾಡಿಗೆ ಮನೆಗಳ ವ್ಯವಸ್ಥೆ ಮಾಡಲಾಗಿದೆ. ಎಲ್ಲ ಕುಟುಂಬಕ್ಕೆ ಮಾಸಿಕ 2,500 ರೂ. ಬಾಡಿಗೆ ನೀಡಲಾಗುತ್ತದೆ. ಲಾಕ್‌ಡೌನ್ ಅವಧಿ ಮುಗಿದ ಬಳಿಕ ಸುರತ್ಕಲ್ ಎನ್‌ಐಟಿಕೆ ತಜ್ಞರ ತಂಡ ಸ್ಥಳಕ್ಕೆ ಭೇಟಿ ನೀಡಿ, ಗುಡ್ಡದ ಧಾರಣಾಶಕ್ತಿ ಅಧ್ಯಯನ ಮಾಡಿ ವರದಿ ನೀಡಲಿದ್ದಾರೆ. ಆ ಬಳಿಕ ಗುಡ್ಡದಲ್ಲಿರುವ ಇತರ ಮನೆಗಳ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ತಹಶೀಲ್ದಾರ್ ಗುರುಪ್ರಸಾದ್ ಹೇಳಿದರು.
ಇತ್ತೀಚೆಗೆ ಸಂಭವಿಸಿದ ಗುಡ್ಡ ಕುಸಿತ ಮತ್ತು ಮಕ್ಕಳಿಬ್ಬರ ಸಹಿತ ಎರಡು ಮನೆಗಳು ಧರಾಶಾಯಿಯಾಗಿರುವ ಭೀಕರ ದುರಂತದ ಬಳಿಕ ಸೈಟ್‌ನಲ್ಲಿ ಪದೇಪದೇ ಗುಡ್ಡ ಕುಸಿತದ ಭೀತಿ ಉಂಟಾಗಿದ್ದು, ಈಗಾಗಲೇ ಕೆಲವು ಮನೆಯವರು ಬೇರೆಡೆಗೆ ಸ್ಥಳಾಂತರಗೊಂಡಿದ್ದಾರೆ. ಇಲ್ಲಿನ ಕುಟುಂಬಗಳಿಗೆ ಹತ್ತಿರದ ನೀರುಮಾರ್ಗ ಗ್ರಾಪಂನ ಬೊಂಡಂತಿಲ ಗ್ರಾಮದಲ್ಲಿರುವ 20.6 ಎಕರೆ ಸರಕಾರಿ ಗೋಮಾಳ ಜಾಗದಲ್ಲಿ ಮನೆ ನಿರ್ಮಿಸಿ ಕೊಡಲು ಕಂದಾಯ ನಿರೀಕ್ಷಕರು, ಉಪ-ತಹಶೀಲ್ದಾರ್ ಸಹಿತ ಜನಪ್ರತಿನಿಧಿಗಳು ಸಮೀಕ್ಷೆ ನಡೆಸಿದ್ದರು. ಇದೀಗ ಗುರುಪುರ ಗ್ರಾಪಂ ವ್ಯಾಪ್ತಿಯ ಮೂಳೂರು ಅಥವಾ ಅಡ್ಡೂರು ಗ್ರಾಮದಲ್ಲಿ ಸರಕಾರಿ ಖಾಲಿ ಜಾಗ ಗುರುತಿಸಲು ಉಪತಹಶೀಲ್ದಾರರಿಗೆ ಸೂಚಿಸಿದ್ದೇನೆ. ಅವರ ವರದಿಯನ್ನಾಧರಿಸಿ ನಿರಾಶ್ರಿತರಿಗೆ ಪರಿಹಾರಕ್ಕಾಗಿ ಸರ್ಕಾರಕ್ಕೆ ವರದಿ ಸಲ್ಲಿಸಿ ಕೂಡಲೇ ಕ್ರಮ ಕೈಗೊಳ್ಳಲಾಗುವುದು ಎಂದು ತಹಶೀಲ್ದಾರ್ ಹೇಳಿದರು.
ಬೊಂಡಂತಿಲ ಗ್ರಾಮದ ಸರಕಾರಿ ಗೋಮಾಳ ಜಾಗದಲ್ಲಿ ಗುರುಪುರದ ನಿರಾಶ್ರಿತರಿಗೆ ಮನೆ ನಿರ್ಮಿಸಿ ಕೊಡಲು ನೀರುಮಾರ್ಗ ಗ್ರಾಪಂನ ನಿರಾಶ್ರಿತರಿಂದ ವಿರೋಧ ವ್ಯಕ್ತವಾಗಿದೆ. ಆದಾಗ್ಯೂ ಬೊಂಡಂತಿಲ ಗ್ರಾಮದ ಗೋಮಾಳ ಜಾಗದ ಪ್ರಸ್ತಾವ ಕೈಬಿಟ್ಟಿಲ್ಲ. ಸದ್ಯ ಆ ಜಾಗವನ್ನೂ ಪರಿಗಣನೆಯಲ್ಲಿಟ್ಟುಕೊಂಡು ಅಡ್ಡೂರು ಮತ್ತು ಮೂಳೂರು ಗ್ರಾಮದಲ್ಲಿ ಖಾಲಿ ಇರುವ ಸರಕಾರಿ ಜಾಗಗಳನ್ನು ಗುರುತಿಸಲು ಸೂಚನೆ ಸಿಕ್ಕಿದೆ ಎಂದು ಉಪತಹಶೀಲ್ದಾರ್ ಶಿವಪ್ರಸಾದ್ ತಿಳಿಸಿಸದರು.
ಸಭೆಯಲ್ಲಿ ಜಿಪಂ ಸದಸ್ಯ ಯುಪಿ ಇಬ್ರಾಹಿಂ, ತಾಪಂ ಸದಸ್ಯ ಸಚಿನ್ ಅಡಪ, ಗುರುಪುರ ಗ್ರಾಪಂ ಉಪಾಧ್ಯಕ್ಷ ಜಿಎಂ ಉದಯ ಭಟ್, ಪಿಡಿಒ ಅಬೂಬಕರ್, ಸದಸ್ಯರಾದ ರಾಜೇಶ್ ಸುವರ್ಣ ಉಪಸ್ಥಿತರಿದ್ದರು







