ಬಾರಕೂರಿನ ಒಂದೇ ಮನೆಯ ಐವರಿಗೆ ಕೊರೋನ ಸೋಂಕು
ಸುತ್ತಮುತ್ತಲಿನ 13 ಮನೆಗಳು, 19 ಅಂಗಡಿಗಳು ಸೀಲ್ಡೌನ್
ಬ್ರಹ್ಮಾವರ, ಜು.20: ಬಾರಕೂರಿನ ಒಂದೇ ಮನೆಯ ನಾಲ್ವರಿಗೆ ಕೊರೋನ ಪಾಸಿಟಿವ್ ಬಂದಿರುವ ಹಿನ್ನೆಲೆಯಲ್ಲಿ ಪ್ರಾಥಮಿಕ ಹಾಗೂ ಸೆಕೆಂಡರಿ ಸಂಪರ್ಕ ದ ಕಾರಣಕ್ಕಾಗಿ ಸೋಂಕಿತರ ಮನೆ ಸಹಿತ ಸುತ್ತಮುತ್ತಲಿನ 13 ಮನೆ ಹಾಗೂ 19 ಅಂಗಡಿಗಳನ್ನು ಇಂದು ಸೀಲ್ಡೌನ್ ಮಾಡಲಾಗಿದೆ.
ಮಲ್ಪೆ ಪೊಲೀಸ್ ಠಾಣಾ ವ್ಯಾಪ್ತಿಯ ಕೋಡಿಬೆಂಗ್ರೆಯ ಕ್ಯಾನ್ಸರ್ ಪೀಡಿತ ವೃದ್ಧೆಯೊಬ್ಬರು ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದು, ಈ ಸಂದರ್ಭದಲ್ಲಿ ವೃದ್ಧೆಯನ್ನು ಕೊರೋನ ಪರೀಕ್ಷೆಗೆ ಒಳಪಡಿಸಲಾಗಿತ್ತು. ಅಲ್ಲಿಂದ ಬಿಡುಗಡೆಗೊಂಡ ಬಳಿಕ ವೃದ್ಧೆ ನೇರವಾಗಿ ಬಾರಕೂರಿನಲ್ಲಿರುವ ತಮ್ಮ ಸಂಬಂಧಿಕರ ಮನೆಗೆ ತೆರಳಿದ್ದರು.
ಬಳಿಕ ವೃದ್ಧೆಗೆ ಕೊರೋನ ಪಾಸಿಟಿವ್ ಎಂಬುದಾಗಿ ವರದಿ ಬಂದಿದೆ. ಅದೇ ರೀತಿ ಆ ಮನೆಯಲ್ಲಿರುವ ಗಂಡ ಹೆಂಡತಿ ಮತ್ತು ಇಬ್ಬರು ಮಕ್ಕಳನ್ನು ಕೂಡ ಪರೀಕ್ಷೆಗೆ ಒಳಪಡಿಸಿದಾಗ ಇಂದು ಪಾಸಿಟಿವ್ ಎಂಬುದಾಗಿ ವರದಿ ಬಂದಿದೆ. ಇದೀಗ ಇವರೆಲ್ಲರನ್ನು ಕೂಡ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸೋಂಕಿತರು ಅಲ್ಲೇ ಸಮೀಪದ ವಾಣಿಜ್ಯ ಸಂಕೀರ್ಣದಲ್ಲಿರುವ ತರಕಾರಿ, ದಿನಸಿ, ಸೆಲೂನ್ ಸೇರಿದಂತೆ ಒಟ್ಟು 19 ಅಂಗಡಿಗಳಿಗೆ ಭೇಟಿ ನೀಡಿರುವ ಸಾಧ್ಯತೆಯಲ್ಲಿ ಈ ಎಲ್ಲ ಅಂಗಡಿಗಳನ್ನು ಸೀಲ್ಡೌನ್ ಮಾಡಲಾಗಿದೆ. ಅಂಗಡಿಯ ಒಟ್ಟು 43 ಮಂದಿಗೆ ಹೋಮ್ ಕ್ವಾರಂಟೇನ್ ವಿಧಿಸಲಾಗಿದೆ.
ಈ ಅಂಗಡಿಗಳಿಗೆ ಭೇಟಿ ನೀಡಿರುವ ಸುತ್ತಮುತ್ತಲಿನ ಸುಮಾರು 13 ಮನೆ ಗಳನ್ನು ಕೂಡ ಸೀಲ್ಡೌನ್ ಮಾಡಲಾಗಿದೆ. ಈ ಮನೆಗಳಲ್ಲಿ ಒಟ್ಟು 35 ಮಂದಿ ಇದ್ದಾರೆ. ವೃದ್ಧೆಯ ಕೋಡಿಬೆಂಗ್ರೆಯ ಮನೆಯನ್ನು ಕೂಡ ಇಂದು ಸೀಲ್ಡೌನ್ ಮಾಡಲಾಗಿದೆ.
ಬಾರಕೂರಿಗೆ ಬ್ರಹ್ಮಾವರ ತಹಶೀಲ್ದಾರ್ ಕಿರಣ್ ಗೋರಯ್ಯ, ಕೋಟ ಕಂದಾಯ ನಿರೀಕ್ಷಕ ರಾಜು, ಬ್ರಹ್ಮಾವರ ಎಸ್ಸೈ ರಾಘವೇಂದ್ರ, ಆರೋಗ್ಯ ಕಾರ್ಯಕರ್ತರು ಭೇಟಿ ನಿೀಡಿ ಸೀಲ್ಡೌನ್ ಪ್ರಕ್ರಿಯೆ ನಡೆಸಿದ್ದಾರೆ.