ಮನೆಗಳ ಪಕ್ಕದಲ್ಲಿ ಕೊರೋನ ಸೋಂಕು ಪರೀಕ್ಷೆ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ಹೈಕೋರ್ಟ್

ಬೆಂಗಳೂರು, ಜು.20: ಮನೆಗಳ ಪಕ್ಕದಲ್ಲಿ ಕೊರೋನ ವೈರಸ್ ಸೋಂಕು ಪರೀಕ್ಷೆ ನಡೆಯುತ್ತಿರುವುದನ್ನು ಪ್ರಶ್ನಿಸಿ ನಾಗರಬಾವಿಯ ಕೆಲ ನಿವಾಸಿಗಳು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹೈಕೋರ್ಟ್ ವಜಾ ಮಾಡಿದೆ.
ಈ ಕುರಿತು ಸಲ್ಲಿಸಿದ್ದ ಅರ್ಜಿ ವಿಚಾರಣೆ ಹೈಕೋರ್ಟ್ ವಿಭಾಗೀಯ ನ್ಯಾಯಪೀಠದಲ್ಲಿ ನಡೆಯಿತು. ನಾಗರಬಾವಿಯ ಖಾಸಗಿ ಲ್ಯಾಬ್‍ನಲ್ಲಿ ಕೊರೋನ ಪರೀಕ್ಷೆ ನಡೆಸಲಾಗುತ್ತಿದೆ. ಲ್ಯಾಬ್ ಪಕ್ಕದಲ್ಲಿ ಮನೆಗಳು ಇರುವ ಹಿನ್ನೆಲೆ ಸೋಂಕು ಹರಡುವ ಸಾಧ್ಯತೆ ಇದೆ ಎಂದು ನಾಗರಬಾವಿಯ ನಿವಾಸಿಗಳು ಹೈಕೋರ್ಟ್ ಮೆಟ್ಟಿಲೇರಿದ್ದರು.
ಅರ್ಜಿ ಕೈಗೆತ್ತಿಗೊಂಡ ನ್ಯಾಯಪೀಠವು, ನಿಮ್ಮ ಮನೆಯ ಬಳಿ ಪರೀಕ್ಷೆ ನಡೆಸಬಾರದೆಂದರೆ ಹೇಗೆ ಎಂದು ಅಸಮಾಧಾನ ವ್ಯಕ್ತಪಡಿಸಿತು. ನಮ್ಮ ಹೈಕೋರ್ಟ್ ನಲ್ಲಿಯೇ 13 ಕೊರೋನ ಸೋಂಕು ಪ್ರಕರಣಗಳು ದೃಢಪಟ್ಟಿವೆ. ಸರಕಾರಿ ವಕೀಲರ ಕಚೇರಿಯಲ್ಲಿ ಒಂದು ಪ್ರಕರಣ ಪತ್ತೆಯಾಗಿದೆ. ಸೋಂಕು ಪತ್ತೆಯಾಗಿದೆ ಎಂದು ಕೆಲಸ ನಿಲ್ಲಿಸಲು ಸಾಧ್ಯವೆ ಎಂದು ಅರ್ಜಿದಾರರ ಪರ ವಕೀಲರನ್ನು ನ್ಯಾಯಪೀಠವು ಪ್ರಶ್ನೆ ಮಾಡಿತು. ಈ ಅರ್ಜಿ ವಿಚಾರಣೆ ಯೋಗ್ಯವಲ್ಲ ಎಂದು ಹೇಳಿ ಪಿಐಎಲ್ ವಜಾಗೊಳಿಸಿ ಆದೇಶ ನೀಡಿತು.







