ವಿಶ್ವ ಕುಂದಾಪ್ರ ಕನ್ನಡ ದಿನಾಚರಣೆಗೆ ಸುರೇಂದ್ರ ಅಡಿಗ ಚಾಲನೆ
"ಭಾಷೆಯ ಸ್ಥಿತ್ಯಂತರಗಳ ಅಧ್ಯಯನಕ್ಕೆ ದಾಖಲೀಕರಣ ಅಗತ್ಯ"

ಬ್ರಹ್ಮಾವರ, ಜು.20: ಸಾಹಿತ್ಯ ಸಮ್ಮೇಳನದ ಸಂದರ್ಭ ಕುಂದಾಪ್ರ ಕನ್ನಡಕ್ಕೆ ಒತ್ತು ನೀಡಿದಾಗ ಭಾಷೆ ಉಳಿಯುವುದಕ್ಕೆ ಸಹಕಾರಿ ಆಗುತ್ತದೆ ಎಂದು ಕನ್ನಡ ಸಾಹಿತ್ಯ ಪರಿಷತ್ ಉಡುಪಿ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಹೇಳಿದ್ದಾರೆ.
ಸಾಸ್ತಾನದ ದಿ.ರಾಮಚಂದ್ರ ತುಂಗರ ಮನೆಯಲ್ಲಿ ಇಂದು ಕುಂದಾಪ್ರ ಕನ್ನಡ ಭಾಷಿಕ ಪ್ರದೇಶದಲ್ಲಿ ಸಾಂಪ್ರದಾಯಿಕವಾಗಿ ಆಸಾಡಿ ಹಬ್ಬವನ್ನು ಆಚರಿಸುವ ಪರಿಯಾದ ಕ್ಯಾನಿಗಿಂಡಿ ಹಿಟ್ಟನ್ನು ಅಕ್ಕಿಮುಡಿಯ ಮೇಲೆ ಇಡುವ ಮೂಲಕ ವಿಶ್ವ ಕುಂದಾಪ್ರ ಕನ್ನಡ ದಿನಾಚರಣೆಗೆ ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು.
ಕುಂದಾಪ್ರ ಕನ್ನಡ ಭಾಷೆಯನ್ನು ಬಳಸಿ ಬಳಸಿ ಬೆಳೆಸುವ ಮತ್ತು ಮುಂದಿನ ಪೀಳಿಗೆಗೆ ತಲುಪಿಸುವ ಜವಾಬ್ದಾರಿ ಪ್ರತಿಯೊಬ್ಬರದ್ದಾಗಿದೆ. ಭಾಷೆಯಲ್ಲಿನ ಸ್ಥಿತ್ಯಂತರಗಳ ಅಧ್ಯಯನಕ್ಕೆ ಭಾಷೆಯನ್ನು ಲಿಖಿತವಾಗಿ ದಾಖಲಿಸಬೇಕು ಎಂದು ಅವರು ಅಭಿಪ್ರಾಯ ಪಟ್ಟರು.
ಕುಂದಾಪ್ರ ಕನ್ನಡದ ರಾಯಭಾರಿ ಮನು ಹಂದಾಡಿ, ಆಸಾಡಿ ಹಬ್ಬದ ಆಚರಣೆ ಮತ್ತು ನೆಲಮೂಲ ಸಂಸ್ಕೃತಿಯ ಆರಾಧಾನೆಯ ಕುರಿತು ಮಾತನಾಡಿದರು. ಈ ಸಂದರ್ಭದಲ್ಲಿ ದೀಪಕ್ ಶೆಟ್ಟಿ ಬಾರ್ಕೂರು, ಉದಯ್ ಶೆಟ್ಟಿ ಪಡುಕೆರೆ, ಹರೀಶ್ ಕಿರಣ್ ತುಂಗ, ಪ್ರವೀಣ್ ಯಕ್ಷೀಮಠ, ಸಲ್ ಶೆಟ್ಟಿ, ಸುನೀಲ್ ಪಾಂಡೇಶ್ವರ್ ಮತ್ತು ಅಶ್ವೀತ್ ಶೆಟ್ಟಿ ಕೊಡ್ಲಾಡಿ ಉಪಸ್ಥಿತರಿದ್ದರು.
ಈ ಬಾರಿ ಕೋವಿಡ್-19 ಕಾರಣಕ್ಕಾಗಿ ಸೀಮಿತ ಜನರೊಂದಿಗೆ ಸರಳ ಮತ್ತು ಸಾಂಪ್ರದಾಯಿಕವಾಗಿ ಕಾರ್ಯಕ್ರಮವನ್ನು ನಡೆಸಲಾಯಿತು. ವಸಂತ ಗಿಳಿಯಾರ್ ಕಾರ್ಯಕ್ರಮ ನಿರೂಪಿಸಿದರು.







