ಹೊಸ ಹಾಡಿನಲ್ಲಿ ಹಿಂಸಾಚಾರಕ್ಕೆ ಉತ್ತೇಜನ ಆರೋಪ: ಗಾಯಕ ಸಿಧು ಮೂಸೆವಾಲ ವಿರುದ್ಧ ಪ್ರಕರಣ ದಾಖಲು

ಫೋಟೊ ಕೃಪೆ: instagram.com/sidhu_moosewala/
ಚಂಡಿಗಢ, ಜು. 20: ಸಾಮಾಜಿಕ ಜಾಲ ತಾಣದಲ್ಲಿ ಎರಡು ದಿನಗಳ ಹಿಂದೆ ಬಿಡುಗಡೆಯಾದ ‘ಸಂಜು’ ಹಾಡಿನಲ್ಲಿ ಹಿಂಸಾಚಾರ ಹಾಗೂ ಗನ್ ಸಂಸ್ಕೃತಿಯನ್ನು ಉತ್ತೇಜಿಸಲಾಗಿದೆ ಎಂದು ಆರೋಪಿಸಿ ಪಂಜಾಬಿ ಗಾಯಕ ಸಿಧು ಮೂಸೆವಾಲ ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಸಿಧು ಮೂಸೆವಾಲ ಅವರ ವಿರುದ್ಧ ದಾಖಲಿಸುತ್ತಿರುವ ಎರಡನೇ ಪ್ರಕರಣ ಇದಾಗಿದೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.
ಕೊರೋನ ಸೋಂಕು ಹರಡುವುದನ್ನು ನಿಯಂತ್ರಿಸಲು ಲಾಕ್ಡೌನ್ ಹೇರಿಕೆಯಾದ ಸಂದರ್ಭ ಫೈಯರಿಂಗ್ ವಲಯದಲ್ಲಿ ಎಕೆ 47ನಲ್ಲಿ ಗುಂಡು ಹಾರಿಸುತ್ತಿರುವ ಅವರ ಫೋಟೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಬಳಿಕ ವಿಪತ್ತು ನಿರ್ವಹಣಾ ಕಾಯ್ದೆ ಹಾಗೂ ಶಸಸ್ತ್ರ ಕಾಯ್ದೆಯ ವಿವಿಧ ಕಲಂ ಅಡಿಯಲ್ಲಿ ಮೂಸೆವಾಲ ವಿರುದ್ಧ ಮೇ 4ರಂದು ಪ್ರಕರಣ ದಾಖಲಿಸಲಾಗಿದೆ.
ನಿರ್ಧಯವಾಗಿ ಶಸ್ತ್ರಾಸ್ತ್ರಗಳ ಬಳಕೆಯನ್ನು ವೈಭವೀಕರಿಸುವ, ಆತನ ವಿರುದ್ಧ ಶಸಸ್ತ್ರ ಕಾಯ್ದೆ ಅಡಿ ದಾಖಲಾಗಿರುವ ಒಂದು ಪ್ರಕರಣ ಸಹಿತ ವಿವಿಧ ಪ್ರಥಮ ಮಾಹಿತಿ ವರದಿಯ ಕುರಿತು ಹೆಮ್ಮೆಪಟ್ಟುಕೊಳ್ಳುವ, ಸಾಮಾಜಿಕ ಮಾಧ್ಯಮದ ವಿವಿಧ ವೇದಿಕೆಗಳಲ್ಲಿ ಟ್ರೆಂಡಿಂಗ್ ಆಗಿರುವ ಆತನ ಹಾಡು ‘ಸಂಜು’ ಕುರಿತು ಸ್ವೀಕರಿಸಲಾದ ಮಾಹಿತಿ ಆಧಾರದಲ್ಲಿ ಮೊಹಾಲಿಯಲ್ಲಿ ಮೂಸೆವಾಲ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪಂಜಾಬ್ ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ ಹಾಗೂ ಪಂಜಾಬ್ ಬ್ಯೂರೊ ಆಫ್ ಇನ್ವೆಸ್ಟಿಗೇಷನ್ನ ನಿರ್ದೇಶಕ ಅರ್ಪಿತ್ ಶುಕ್ಲಾ ತಿಳಿಸಿದ್ದಾರೆ.
ಮೂಸೆವಾಲನ ಅಧಿಕೃತ ಯುಟ್ಯೂಬ್ ಚಾನೆಲ್ ಅಪ್ಲೋಡ್ ಮಾಡಲಾದ ಇತ್ತೀಚೆಗಿನ ವೀಡಿಯೊ ಹಾಡು ‘ಸಂಜು’ವನ್ನು ಪರಿಶೀಲಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.







