ಅಮೆರಿಕ: ಚೀನಾ ರಾಯಭಾರ ಕಚೇರಿ ಎದುರು ಭಾರತೀಯರ ಪ್ರತಿಭಟನೆ
ವಾಶಿಂಗ್ಟನ್, ಜು. 20: ವಾಸ್ತವಿಕ ಗಡಿ ರೇಖೆಯಲ್ಲಿ ಚೀನಾದ ಅತಿಕ್ರಮಣವನ್ನು ವಿರೋಧಿಸಿ ಭಾರತೀಯ ಅಮೆರಿಕನ್ನರ ಗುಂಪೊಂದು ಅಮೆರಿಕದ ರಾಜಧಾನಿ ವಾಶಿಂಗ್ಟನ್‌ನಲ್ಲಿರುವ ಚೀನಾ ರಾಯಭಾರ ಕಚೇರಿಯ ಎದುರು ರವಿವಾರ ಶಾಂತಿಯುತ ಪ್ರದರ್ಶನ ನಡೆಸಿತು.
ಪ್ರದರ್ಶನಕಾರರು ಚೀನಾ ವಿರೋಧಿ ಫಲಕಗಳನ್ನು ಪ್ರದರ್ಶಿಸಿದರು ಹಾಗೂ ‘ಚೀನಾ ಕಮ್ಯುನಿಸ್ಟ್: ಡೌನ್ ಡೌನ್’ ಮುಂತಾದ ಘೋಷಣೆಗಳನ್ನು ಕೂಗಿದರು. ‘‘ಚೀನಾ ವೈರಸ್ ಜಗತ್ತಿನಾದ್ಯಂತ ಲಕ್ಷಾಂತರ ಮಂದಿಯನ್ನು ಕೊಂದಿದೆ ಹಾಗೂ ಜಾಗತಿಕ ಆರ್ಥಿಕತೆಯನ್ನು ಪಾತಾಳಕ್ಕೆ ಇಳಿಸಿದೆ’’ ಎಂದು ಪ್ರದರ್ಶನಕಾರರು ಹೇಳಿದರು.
‘‘ನಾವು ಅಪ್ರಚೋದಿತ ಚೀನೀ ಆಕ್ರಮಣ, ಜಮೀನು ಆಕ್ರಮಣ ಮತ್ತು ಲಡಾಖ್‌ನಲ್ಲಿರುವ ಭಾರತೀಯ ನೆಲದಲ್ಲಿ ಚೀನಾ ನಡೆಸಿದ ಭಾರತೀಯರ ಹತ್ಯೆಯನ್ನು ಖಂಡಿಸುತ್ತೇವೆ. ಜಗತ್ತು ಕೋವಿಡ್-19 ಸಾಂಕ್ರಾಮಿಕವನ್ನು ನಿಭಾಯಿಸುತ್ತಿರುವಾಗ ಚೀನಾ ಈ ಆಕ್ರಮಣದಲ್ಲಿ ತೊಡಗಿದೆ’’ ಎಂದು ಸಮುದಾಯ ಕಾರ್ಯಕರ್ತ ಮನೋಜ್ ಶ್ರೀನಿಲಯಮ್ ಹೇಳಿದರು.
ಕೇರಳ ಅಸೋಸಿಯೇಶನ್ ಆಫ್ ಗ್ರೇಟರ್ ವಾಶಿಂಗ್ಟನ್, ದುರ್ಗಾ ಟೆಂಪಲ್ ಫ್ರೆಂಡ್ಸ್, ತಮಿಳು ಸಾಂಸ್ಕತಿಕ ಗುಂಪುಗಳು ಮತ್ತು ಹೊವಾರ್ಡ್ ಕೌಂಟಿಯ ಭಾರತೀಯ ಸಾಂಸ್ಕತಿಕ ಅಸೋಸಿಯೇಶನ್‌ಗಳು, ನ್ಯಾಶನಲ್ ಕೌನ್ಸಿಲ್ ಆಫ್ ಏಶ್ಯನ್ ಇಂಡಿಯನ್ ಅಸೋಸಿಯೇಶನ್ಸ್ ಮತ್ತು ವಿಶ್ವ ಹಿಂದೂ ಪರಿಶದ್ ಆಫ್ ಅಮೆರಿಕ ಮುಂತಾದ ಸಂಘಟನೆಗಳು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದವು.







