ಸಿಇಟಿ ಪರೀಕ್ಷೆ: ಎಸ್‍ಒಪಿ ಬಿಡುಗಡೆ ಮಾಡಿದ ಆರೋಗ್ಯ ಇಲಾಖೆ
ಬೆಂಗಳೂರು, ಜು.20: ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಜು.30ರಿಂದ ಎರಡು ದಿನಗಳ ಕಾಲ ನಡೆಸಲು ಉದ್ದೇಶಿಸಿರುವ ಸಾಮಾನ್ಯ ಪ್ರವೇಶ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳ ಸುರಕ್ಷತೆಗೆ ಸಂಬಂಧಿಸಿದಂತೆ ಆರೋಗ್ಯ ಇಲಾಖೆ ಪ್ರಮಾಣಿತ ಕಾರ್ಯಾಚರಣ ವಿಧಾನ(ಎಸ್‍ಒಪಿ) ಬಿಡುಗಡೆ ಮಾಡಿದೆ.
ಪರೀಕ್ಷಾ ಕೇಂದ್ರ ಹೇಗಿರಬೇಕು, ಪರೀಕ್ಷೆ ಬರೆಯಲು ಬರುವ ವಿದ್ಯಾರ್ಥಿಗಳಿಗೆ ಕೊಠಡಿಯ ಒಳಗೆ ಆಸನದ ವ್ಯವಸ್ಥೆ, ಕೊಠಡಿ ಮೇಲ್ವಿಚಾರಕರು ಹಾಗೂ ಸಿಬ್ಬಂದಿ ವರ್ಗ ಅನುಸರಿಸಬೇಕಾದ ಅಂಶಗಳು ಮತ್ತು ವಿದ್ಯಾರ್ಥಿಗಳ ಆರೋಗ್ಯದ ದೃಷ್ಟಿಯಿಂದ ಕೈಗೊಳ್ಳಬೇಕಾದ ಅಗತ್ಯ ಕ್ರಮದ ಬಗ್ಗೆ ಎಸ್‍ಒಪಿಯಲ್ಲಿ ತಿಳಿಸಿದೆ.
ಯಾವುದೇ ಪರೀಕ್ಷಾ ಕೇಂದ್ರದ ಕಂಟೈನ್ಮೆಂಟ್ ವಲಯದಲ್ಲಿ ಇರದಂತೆ ನೋಡಿಕೊಳ್ಳಬೇಕು. ಪ್ರತಿ ಪರೀಕ್ಷಾ ಕೇಂದ್ರದಲ್ಲೂ ವಿಶೇಷ ಕೊಠಡಿ ಮೀಸಲಿಡಬೇಕು. ಅದರಲ್ಲಿ ಕಂಟೈನ್ಮೆಂಟ್ ವಲಯದಿಂದ ಬರುವ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಡಬೇಕು. ಪರೀಕ್ಷಾ ಕೇಂದ್ರವನ್ನು ಕ್ವಾರಂಟೈನ್ ಕೇಂದ್ರವಾಗಿ ಬಳಸಲು ಅವಕಾಶ ನೀಡಬಾರದು.
ಪರೀಕ್ಷಾ ಕೇಂದ್ರವನ್ನು ಮೂರು ದಿನಗಳ ಮೊದಲೇ ಸೋಂಕು ನಿವಾರಕ ದ್ರಾವಣದಿಂದ ಸ್ವಚ್ಛಗೊಳಿಸಬೇಕು. ಪರೀಕ್ಷಾ ಕೊಠಡಿಯ ಒಳಗೆ ಮತ್ತು ಹೊರಗೆ ಸಾಮಾಜಿಕ ಅಂತರ, ಸ್ಯಾನಿಟೈಜರ್, ಮಾಸ್ಕ್ ಧರಿಸುವುದು ಕಡ್ಡಾಯವಾಗಿದೆ. ಕೇಂದ್ರಕ್ಕೆ ಪ್ರವೇಶಿಸುವ ಪ್ರತಿಯೊಬ್ಬರ ಆರೋಗ್ಯ ತಪಾಸಣೆ ಮಾಡಬೇಕು ಎಂದು ತಿಳಿಸಿದೆ.
ಪ್ರತಿ ಜಿಲ್ಲಾ ಕೇಂದ್ರದಲ್ಲಿ ಕನಿಷ್ಠ ಒಂದು ಹೆಚ್ಚುವರಿ ಪರೀಕ್ಷಾ ಕೇಂದ್ರ ಗುರುತಿಸಬೇಕು. ಬೆಂಗಳೂರಿನಲ್ಲಿ ಹೆಚ್ಚು ಕೇಂದ್ರ ಇರುವುದರಿಂದ ಇಲ್ಲಿ ನಾಲ್ಕು ಹೆಚ್ಚುವರಿ ಕೇಂದ್ರ ಗುರುತಿಸಬೇಕು. ಪ್ರತಿ ವಿದ್ಯಾರ್ಥಿಯು ತಮ್ಮದೇ ಆದ ನೀರಿನ ಬಾಟಲಿ ತರಲು ಅವಕಾಶ ನೀಡಬೇಕು. ಪರೀಕ್ಷಾ ಕೇಂದ್ರಕ್ಕೆ ವಿದ್ಯಾರ್ಥಿಗಳು ಮುಂಚಿತವಾಗಿ ಬರುವುದರಿಂದ ಆಹಾರದ ಡಬ್ಬ ತರಲು ಅವಕಾಶ ಮಾಡಿಕೊಡಬೇಕು.
ಕೆಮ್ಮು, ನೆಗಡಿ, ಜ್ವರ ಅಥವಾ ಗೆಂಟಲು ಕೆರತದಿಂದ ಬಳಲುತ್ತಿರುವ ವಿದ್ಯಾರ್ಥಿಗಳಿಗೆ ಹಾಗೂ ಕಂಟೈನ್ಮೆಂಟ್ ವಲಯದ ವಿದ್ಯಾರ್ಥಿಗಳಿಗಾಗಿ ವಿಶೇಷ ಕೊಠಡಿ ಕಾಯ್ದಿರಿಸಬೇಕು. ಕಂಟೈನ್ಮೆಂಟ್ ವಲಯದಲ್ಲಿ ಪರೀಕ್ಷಾ ಕೇಂದ್ರ ಬಂದಲ್ಲಿ, ಅದನ್ನು ಹೆಚ್ಚುವರಿಯಾಗಿ ಕಾಯ್ದಿರಿಸಿ ಕೇಂದ್ರಕ್ಕೆ ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿ ಸ್ಥಳಾಂತರಿಸಬೇಕು ಎಂದು ಎಸ್‍ಒಪಿಯಲ್ಲಿ ತಿಳಿಸಿದೆ.
ಪರೀಕ್ಷಾ ಕೇಂದ್ರದ ಸುರಕ್ಷತೆ ದೃಷ್ಟಿಯಿಂದ ಮೇಲ್ವಿಚಾರಕರು ಹಾಗೂ ಸಿಬ್ಬಂದಿ ವರ್ಗ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕಾ ಕ್ರಮ, ಪ್ರತಿಯೊಬ್ಬರ ಆರೋಗ್ಯ ತಪಾಸಣೆಗೆ ಸಿದ್ಧತೆ, ಬೆಳಗ್ಗೆ 8 ಗಂಟೆಗೆ ಪರೀಕ್ಷಾ ಕೇಂದ್ರ ತೆರೆಯುವುದು, ಪರೀಕ್ಷಾ ತುರ್ತು ಕಾರ್ಯಕ್ಕಾಗಿ ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲಿ ಒಂದು ಆಂಬ್ಯುಲೆನ್ಸ್ ಮೀಸಲಿಟ್ಟುಕೊಳ್ಳಬೇಕು ಎಂಬುದನ್ನು ಸೂಚಿಸಿದೆ.
ನಿಯಂತ್ರಣ ವಲಯದಿಂದ ಬರುವ ಕೊರೋನ ಸೋಂಕಿತರ ನೇರ ಅಥವಾ ಪ್ರಾಥಮಿಕ ಅಥವಾ ಹೆಚ್ಚಿನ ಅಪಾಯದ ಸಂಪರ್ಕ ಹೊಂದಿರುವ ಅಭ್ಯರ್ಥಿಗಳಿಗೆ ಪ್ರತ್ಯೇಕ ಕೊಠಡಿಯಲ್ಲಿ ಪರೀಕ್ಷೆ ಬರೆಯಲು ಅವಕಾಶ ನೀಡಬೇಕು. ಕೊರೋನ ದೃಢಪಟ್ಟಿರುವ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಕೊಠಡಿಯನ್ನು ವ್ಯವಸ್ಥೆ ಮಾಡಬೇಕು.
ನಿಯಂತ್ರಣ ವಲಯದಿಂದ ಬರುವ ರೋಗ ಲಕ್ಷಣ ಅಥವಾ ಕೊರೋನ ದೃಢಪಟ್ಟಿರುವ ಅಭ್ಯರ್ಥಿಗಳು ಬರೆದ ಪರೀಕ್ಷಾ ಕೊಠಡಿಯನ್ನು ಸೋಂಕು ನಿವಾರಕ ದ್ರಾವಣದಿಂದ ಸ್ವಚ್ಛ ಮಾಡಬೇಕು. ಹೊರ ರಾಜ್ಯ ಅಥವಾ ಹೊರ ದೇಶದಿಂದ ಆಗಮಿಸಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಹಾಗೂ ಅವರ ಸಹಾಯಕರಿಗೆ ಸೂಕ್ತ ಮುನ್ನೆಚ್ಚರಿಕೆ ವಹಿಸಿ, ಪರೀಕ್ಷೆ ತೆರೆದುಕೊಳ್ಳಲು ಅನುಮತಿ ನೀಡುವುದು ಹಾಗೂ ಅಂತಹ ವಿದ್ಯಾರ್ಥಿಗಳನ್ನು ಕ್ವಾರಂಟೈನ್‍ನಿಂದ ಅನುಮತಿ ನೀಡಿ ವಿಶೇಷ ಕೊಠಡಿಯಲ್ಲಿ ಪರೀಕ್ಷೆ ಬರೆಯಲು ವ್ಯವಸ್ಥೆ ಮಾಡಲು ಪ್ರಕಟನೆಯಲ್ಲಿ ತಿಳಿಸಲಾಗಿದೆ.







