‘ರಾಜಗೃಹ’ದ ಮೇಲಿನ ದಾಳಿ ಖಂಡಿಸಿ ಮಂಡ್ಯದಲ್ಲಿ ದಸಂಸ ಪ್ರತಿಭಟನೆ

ಮಂಡ್ಯ, ಜು.20: ಅಂಬೇಡ್ಕರ್ ನಿವಾಸ ‘ರಾಜಗೃಹ’ದ ಮೇಲಿನ ದಾಳಿ ಖಂಡಿಸಿ ಹಾಗೂ ದುಷ್ಕೃತ್ಯದ ಹಿಂದಿರುವ ವ್ಯಕ್ತಿ-ಶಕ್ತಿಗಳ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿ ದಸಂಸ ಒಕ್ಕೂಟದ ನೇತೃತ್ವದಲ್ಲಿ ಸೋಮವಾರ ನಗರದಲ್ಲಿ ಪ್ರತಿಭಟನೆ ನಡೆಯಿತು.
ಅಂಬೇಡ್ಕರ್ ಪ್ರತಿಮೆ ಬಳಿಯಿಂದ ಪ್ರತಿಭಟನಾ ಮೆರವಣಿಗೆ ನಡೆಸಿ ಕೃತ್ಯವನ್ನು ಖಂಡಿಸಿದ ನೂರಾರು ಮಂದಿ ಜಿಲ್ಲಾಧಿಕಾರಿ ಡಾ.ವೆಂಕಟೇಶ್ ಮೂಲಕ ರಾಷ್ಟ್ರಪತಿ ಅವರಿಗೆ ಮನವಿಪತ್ರ ಸಲ್ಲಿಸಿದರು.
ಮುಂಬೈನ ದಾದಾರ್‍ನಲ್ಲಿರುವ ಸಂವಿಧಾನ ಶಿಲ್ಪಿ ಡಾ.ಅಂಬೇಡ್ಕರ್ ಅವರ ನಿವಾಸ ರಾಜಗೃಹದ ಮೇಲೆ ದಾಳಿ ಮಾಡಿ ವಿರೂಪಗೊಳಿಸಿರುವ ಪ್ರಯತ್ನ ಪೂರ್ವನಿಯೋಜಿತ ಕೃತ್ಯವಾಗಿದೆ ಎಂದು ಅವರು ಆರೋಪಿಸಿದರು.
ಬುದ್ಧ ಹುಟ್ಟಿದ ಈ ನಾಡಿನಲ್ಲಿ ಅವರ ಅಪ್ಪಟ ಅನುಯಾಯಿ, ಜೀವನವಿಡೀ ಅಸಮಾನತೆ, ಅಸ್ಪೃಶ್ಯತೆ ಮತ್ತು ಶೋಷಣೆಯ ವಿರುದ್ಧ ಸಮರವನ್ನೇ ಸಾರಿ ಹೋರಾಟ ಮಾಡಿದ ಅಂಬೇಡ್ಕರ್ ಅವರ ಗೃಹ ಒಂದು ಸಾಮಾನ್ಯ ಗೃಹವಲ್ಲ. ಇದು ಇದು ಶೋಷಿತ ಸಮುದಾಯದ ಸ್ವಾಭಿಮಾನದ ಅಮೂಲ್ಯ ಸ್ಮಾರಕ ಎಂದು ಅವರು ಪ್ರತಿಪಾದಿಸಿದರು.
ಚರಿತ್ರೆಯುದ್ದಕ್ಕೂ ಮತ್ತು ಈಗಲೂ ಅಸ್ಪೃಶ್ಯ ಸಮುದಾಯಗಳ ಮೇಲೆ ದೌರ್ಜನ್ಯ, ದಬ್ಬಾಳಿಕೆ, ಕೊಲೆಸುಲಿಗೆ, ಅತ್ಯಾಚಾರ, ಲೈಂಗಿಕ ಕಿರುಕುಳದಂತಹ ಹೀನ ಕೃತ್ಯಗಳು ನಿರಂತರವಾಗಿ ನಡೆಯುತ್ತಲೆ ಇವೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.
ಅಂಬೇಡ್ಕರ್ ರಚಿಸಿರುವ ಸಂವಿಧಾವನ್ನು ದೇಹಲಿಯ ಜಂತರ್ ಮಂತರ್ ನಲ್ಲಿ ಬಹಿರಂಗವಾಗಿ ಸುಟ್ಟು ಜಾತಿವಾದಿಗಳು ತಮ್ಮ ವಿಕೃತಿಯನ್ನು ಪ್ರದರ್ಶಿಸಿದ್ದಾರೆ. ಹಾಗೆಯೇ ಅಂಬೇಡ್ಕರ್ ಪ್ರತಿಮೆ, ಸ್ಮಾರಕಗಳಿಗೆ ಅಪಮಾನ ಮಾಡುತ್ತಾ ಅಂಬೇಡ್ಕರ್ ಪ್ರತಿಪಾದಿಸಿದ ಸಮಾನತೆ, ಭ್ರಾತೃತ್ವ, ಸಾಮಾಜಿಕ ನ್ಯಾಯಕ್ಕೆ ಧಕ್ಕೆಯುಂಟು ಮಾಡುತ್ತಿದ್ದಾರೆ ಮತ್ತು ಪ್ರಜಾಪ್ರಭುತ್ವವನ್ನು ಬುಡಮೇಲು ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದು ಅವರು ಕಿಡಿಕಾರಿದರು.
ಅಂಬೇಡ್ಕರ್ ನಿವಾಸದ ಮೇಲೆ ದಾಳಿ ಮಾಡಿದ ಧುರಳರು, ಅವರ ಹಿಂದಿರುವ ವ್ಯಕ್ತಿ ಮತ್ತು ಸಂಘಟನೆಗಳನ್ನು ಪತ್ತೆಹಚ್ಚಿ ಕಿಠಿಣ ಶಿಕ್ಷೆಗೊಳಪಡಿಸಬೇಕು. ಇಂತಹ ಘಟನೆಗಳು ಮುರಕಳಿಸದಂತೆ ಎಚ್ಚರ ವಹಿಸಬೇಕೆಂದು ಕೇಂದ್ರ ಮತ್ತು ಮಹಾರಾಷ್ಟ್ರ ಸರಕಾರಗಳಿಗೆ ನಿರ್ದೇಶನ ನೀಡಬೇಕು ಎಂದು ಅವರು ರಾಷ್ಟ್ರಪತಿಗಳನ್ನು ಆಗ್ರಹಿಸಿದರು.
ದಸಂಸ ರಾಜ್ಯ ಸಂಚಾಲಕ ಗುರುಪ್ರಸಾದ್ ಕೆರಗೋಡು, ಸಂಘಟನಾ ಸಂಚಾಲಕರಾದ ಎಂ.ಬಿ.ಶ್ರೀನಿವಾಸ್, ಅಂದಾನಿ ಸೋಮನಹಳ್ಳಿ, ಕೆಂಪಯ್ಯ ಸಾಗ್ಯ, ರಮಾನಂದ, ವಜ್ರಮುನಿ, ಪ್ರೊ.ಬಿ.ಎಸ್.ಚಂದ್ರಶೇಖರ್, ಶಾಸಕ ಡಾ.ಕೆ.ಅನ್ನದಾನಿ, ಬಿಎಸ್ಪಿ ರಾಜ್ಯಾಧ್ಯಕ್ಷ ಎಂ.ಕೃಷ್ಣಮೂರ್ತಿ, ರೈತಸಂಘದ ಮುಖಂಡರಾದ ಸುನಂದ ಜಯರಾಂ, ಮಂಜೇಶ್‍ಗೌಡ, ಹೆಮ್ಮಿಗೆ ಚಂದ್ರಶೇಖರ್, ಸಿಐಟಿಯುನ ಸಿ.ಕುಮಾರಿ, ಜಿಪಂ ಮಾಜಿ ಅಧ್ಯಕ್ಷ ತಗ್ಗಹಳ್ಳಿ ವೆಂಕಟೇಶ್, ಪ್ರಾಂತ ರೈತಸಂಘದ ಟಿ.ಎಲ್.ಕೃಷ್ಣೇಗೌಡ, ಟಿ.ಯಶವಂತ, ನಗರಸಭೆ ಮಾಜಿ ಅಧ್ಯಕ್ಷೆ ವಿಜಯಲಕ್ಷ್ಮಿ, ಕಾಂಗ್ರೆಸ್ ಮುಖಂಡರಾದ ಡಾ.ರವೀಚಿದ್ರ, ಸಿ.ಎಂ.ದ್ಯಾವಪ್ಪ, ಲವಕುಮಾರ್, ಸಿ.ಎಂ.ಆನಂದ ಚಿಕ್ಕಮಂಡ್ಯ, ಜೆಡಿಎಸ್ ಮುಖಂಡರಾದ ಎಸ್.ಡಿ.ಜಯರಾಂ, ಟಿಡಿ.ಬಸವರಾಜು, ಗುರುಸಿದ್ದಯ್ಯ, ವಿವಿಧ ಪಕ್ಷಗಳ, ಸಂಘಟನೆಗಳ ಮುಖಂಡರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.








