ಎರಡು ಸಾವಿರ ಗೃಹ ರಕ್ಷಕ ದಳ ಸಿಬ್ಬಂದಿ ನೀಡುವಂತೆ ಬಿಬಿಎಂಪಿ ಮನವಿ

ಬೆಂಗಳೂರು, ಜು.20: ರ‍್ಯಾಪಿಡ್ ಆಂಟಿಜೆನ್ ಟೆಸ್ಟ್‍ನ ಮೊಬೈಲ್ ವಾಹನಗಳಿಗೆ ಸಿಬ್ಬಂದಿ ಅಗತ್ಯವಿರುವ ಹಿನ್ನೆಲೆ ಎರಡು ಸಾವಿರ ಗೃಹ ರಕ್ಷಕ ದಳದ ಸಿಬ್ಬಂದಿಯನ್ನು ಒದಗಿಸುವಂತೆ ಕಮಾಂಡೆಂಟ್ ಜನರಲ್ ಹೋಮ್ ಗಾರ್ಡ್ಸ್ ಪೊಲೀಸ್ ಮಹಾನಿರ್ದೇಶಕರಿಗೆ ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಪತ್ರ ಬರೆದಿದ್ದಾರೆ.
ಕೊರೋನ ವಿಶೇಷ ಕರ್ತವ್ಯಕ್ಕಾಗಿ ಸರಕಾರ ನೀಡಿರುವ ಆದೇಶಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ಹಾಲಿ ಲಭ್ಯವಿರುವ ಅಧಿಕಾರಿ-ಸಿಬ್ಬಂದಿಯನ್ನು ಬೆಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ನಿಯೋಜಿಸಲಾಗಿರುತ್ತದೆ. ಆದರೆ, ಕೊರೋನ ಕರ್ತವ್ಯದ ವೇಳೆ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ 720ಕ್ಕೂ ಹೆಚ್ಚು ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿ ಕೊರೋನ ಸೋಂಕಿಗೆ ಒಳಗಾಗಿದ್ದಾರೆ. ಅಲ್ಲದೆ, ಅವರೊಂದಿಗೆ ಸಂಪರ್ಕದಲ್ಲಿದ್ದ 730ಕ್ಕೂ ಹೆಚ್ಚು ಮಂದಿ ಕ್ವಾರಂಟೈನ್‍ಗೆ ಒಳಗಾಗಿದ್ದಾರೆ.
ಸುಮಾರು 1,200ಕ್ಕೂ ಅಧಿಕ 50 ವರ್ಷ ಮೇಲ್ಪಟ್ಟ ಅಧಿಕಾರಿ ಮತ್ತು ಸಿಬ್ಬಂದಿ ಮನೆಯಿಂದಲೇ ಕೆಲಸ ನಿರ್ವಹಿಸುತ್ತಿದ್ದಾರೆ. ಹೀಗಾಗಿ, ಪೊಲೀಸ್ ಸಿಬ್ಬಂದಿ ಕೊರತೆ ಉಂಟಾಗಿದ್ದು, ರ್ಯಾಪಿಡ್ ಆಂಟಿಜೆನ್ ಟೆಸ್ಟ್‍ನ 100 ಮೊಬೈಲ್ ವಾಹನಗಳಿಗೆ ತಲಾ ಇಬ್ಬರು ಸಿಬ್ಬಂದಿಯಂತೆ 200 ಮಂದಿಯನ್ನು ಒದಗಿಸಬೇಕಾಗಿದೆ. ಈ ಹಿನ್ನೆಲೆಯಲ್ಲಿ ಹೆಚ್ಚುವರಿಯಾಗಿ 2000 ಗೃಹ ರಕ್ಷಕ ದಳದ ಸಿಬ್ಬಂದಿ ಒದಗಿಸುವಂತೆ ಮನವಿ ಮಾಡಿದ್ದಾರೆ.





