ಒಲಿಂಪಿಕ್ಸ್ ನಲ್ಲಿ ಭಾರತಕ್ಕೆ ಪದಕ ಗೆಲ್ಲಲು ಉತ್ತಮ ಅವಕಾಶ: ಸರ್ದಾರ್ ಸಿಂಗ್

ಹೊಸದಿಲ್ಲಿ, ಜು.20: ಭಾರತದ ಹಾಕಿ ತಂಡದ ಮಾಜಿ ನಾಯಕ ಸರ್ದಾರ್ ಸಿಂಗ್ ಒಲಿಂಪಿಕ್ಸ್ ನಲ್ಲಿ ತಮಗೆ ಪದಕ ಗೆಲ್ಲಲು ಸಾಧ್ಯವಾಗದಿರುವುದಕ್ಕೆ ವಿಷಾದಿಸಿದ್ದಾರೆ. ಆದರೆ ಭಾರತದ ಈಗಿನ ತಂಡಕ್ಕೆ ಟೋಕಿಯೊದಲ್ಲಿ ಪದಕ ಗೆಲ್ಲಲು ಉತ್ತಮ ಅವಕಾಶವಿದೆ ಎಂದು ಹೇಳಿದ್ದಾರೆ.
314 ಅಂತರ್‌ರಾಷ್ಟ್ರೀಯ ಪಂದ್ಯಗಳನ್ನು ಆಡಿದ ಸರ್ದಾರ್ ಸಿಂಗ್ ತನ್ನ ವೃತ್ತಿಜೀವನದಲ್ಲಿರುವ ಏಕೈಕ ವಿಷಾದವೆಂದರೆ ತಮ್ಮ ದೇಶಕ್ಕೆ ಒಲಿಂಪಿಕ್ಸ್ ಪದಕ ಗೆಲ್ಲದಿರುವುದು ಎಂದು ಹೇಳಿದರು.
ಆದಾಗ್ಯೂ, ಮುಂದಿನ ವರ್ಷ ಟೋಕಿಯೊದಲ್ಲಿ ನಾಲ್ಕು ದಶಕಗಳಷ್ಟು ಹಳೆಯದಾದ ಅಡೆತಡೆಯನ್ನು ಮುರಿಯುವ ಸಾಮರ್ಥ್ಯ ಮನ್‌ಪ್ರೀತ್ ಸಿಂಗ್ ಅವರ ನೇತೃತ್ವದ ತಂಡಕ್ಕೆ ಇದೆ ಎಂದು ಅವರು ಭಾವಿಸಿದ್ದಾರೆ.
‘‘ಹಾಕಿಯಲ್ಲಿ ನನ್ನ ಪ್ರಯಾಣವು ತೃಪ್ತಿಕರವಾಗಿದೆ. 2012ರಲ್ಲಿ ಲಂಡನ್ ಒಲಿಂಪಿಕ್ಸ್‌ನಲ್ಲಿ ಭಾರತ ಕೊನೆಯ ಸ್ಥಾನ ಗಳಿಸುವುದರಿಂದ ಹಿಡಿದು 2018ರಲ್ಲಿ ನನ್ನ ಬೂಟುಗಳನ್ನು ನೇತುಹಾಕುವ ಹೊತ್ತಿಗೆ ವಿಶ್ವದ ನಂ.6 ಸ್ಥಾನಕ್ಕೆ ತಲುಪಿತ್ತು. ‘‘ಈಗ, ಪ್ರಸ್ತುತ ತಂಡವು ನಂ.4 ಕ್ಕೇರಲು ಸಜ್ಜ್ಜಾಗಿದೆ.ಇದು ಟೋಕಿಯೊ ಒಲಿಂಪಿಕ್ಸ್ ಅಭಿಯಾನದ ಮುನ್ನಡೆಯಲ್ಲಿ ಈ ತಂಡಕ್ಕೆ ಖಂಡಿತವಾಗಿಯೂ ಹೆಚ್ಚಿನ ವಿಶ್ವಾಸವನ್ನು ತರಬೇಕು’’ ಎಂದು ಸರ್ದಾರ್‌ಹೇಳಿದರು.
ಭಾರತ ತಂಡವು ಶ್ರೀಮಂತ ಒಲಿಂಪಿಕ್ಸ್ ಇತಿಹಾಸವನ್ನು ಹೊಂದಿದ್ದು, ಅಭೂತಪೂರ್ವ ಎಂಟು ಚಿನ್ನದ ಜೊತೆಗೆ ಬೆಳ್ಳಿ ಮತ್ತು ಎರಡು ಕಂಚಿನ ಪದಕಗಳನ್ನು ಗೆದ್ದಿದೆ.
ನಾಲ್ಕು ವರ್ಷಗಳಿಗೊಮ್ಮೆ ನಡೆಯುವ ಒಲಿಂಪಿಕ್ಸ್‌ನಲ್ಲಿ ಭಾರತದ ಕೊನೆಯ ಯಶಸ್ಸು 40 ವರ್ಷಗಳ ಹಿಂದೆ 1980ರ ಮಾಸ್ಕೋ ಒಲಿಂಪಿಕ್ಸ್ ನಲ್ಲಿ ಬಂದಿತು. ಅಲ್ಲಿ ಅದು ತನ್ನ ಎಂಟು ಚಿನ್ನದ ಪದಕಗಳಲ್ಲಿ ಕೊನೆಯದನ್ನು ಗೆದ್ದುಕೊಂಡಿತು.
ಭಾರತದ ಹಾಕಿ ತಂಡ ವರ್ಷದಿಂದ ವರ್ಷಕ್ಕೆ ಬೆಳೆಯುತ್ತಿರುವುದನ್ನು ಮತ್ತು ಈ ವರ್ಷದ ಆರಂಭದಲ್ಲಿ ಎಫ್‌ಐಎಚ್ ಹಾಕಿ ಪ್ರೊ ಲೀಗ್‌ನಲ್ಲಿ ಆಡಿದ ರೀತಿಯನ್ನು ನೋಡಿದರೆ, ತಂಡ ಒಲಿಂಪಿಕ್ಸ್ ಪದಕವನ್ನು ಗಳಿಸಬಹುದೆಂದು ನನಗೆ ಬಹಳ ಭರವಸೆ ಇದೆ. ಟೋಕಿಯೊದಲ್ಲಿ ಅವರಿಗೆ ಖಂಡಿತವಾಗಿಯೂ ವಾಸ್ತವಿಕ ಅವಕಾಶವಿದೆ ಎಂದು ಹಾಕಿ ಇಂಡಿಯಾದ ಹೇಳಿಕೆಯೊಂದರಲ್ಲಿ ಸರ್ದಾರ್ ತಿಳಿಸಿದ್ದಾರೆ.
ಕೋವಿಡ್-19 ಸಾಂಕ್ರಾಮಿಕ ರೋಗದಿಂದಾಗಿ 2020ರ ಟೋಕಿಯೊ ಒಲಿಂಪಿಕ್ಸ್ ಕ್ರೀಡಾಕೂಟವನ್ನು ಒಂದು ವರ್ಷ ಮುಂದೂಡಲಾಗಿರುವ ಕಾರಣದಿಂದಾಗಿ ಭಾರತೀಯ ತಂಡಕ್ಕೆ ಹೊಸ ಪ್ರತಿಭೆಗಳನ್ನು ಕಂಡುಹಿಡಿಯಲು ಸ್ವಲ್ಪಸಮಯ ಸಿಗುತ್ತದೆ ಎಂದು ಸರ್ದಾರ್ ಅಭಿಪ್ರಾಯಪಟ್ಟರು.
‘‘ಲಭ್ಯವಿರುವ ಹೊಸ ಪ್ರತಿಭೆಗಳನ್ನು ಬೆಳೆಸಲು ಭಾರತದ ತಂಡಕ್ಕೆ ಸಮಯವಿದೆ. ರಾಜ್‌ಕುಮಾರ್, ದಿಲ್‌ಪ್ರೀತ್, ವಿವೇಕ್ ಸಾಗರ್, ಗುರ್ಸಾಹಿಬ್ಜಿತ್‌ಅವರಂತಹ ಕೆಲವು ಯುವಕರು ಉತ್ತಮ ಭರವಸೆಯನ್ನು ತೋರಿಸಿದ್ದಾರೆ ಮತ್ತು ಪ್ರೊ ಲೀಗ್‌ನಂತಹ ದೊಡ್ಡ ಪಂದ್ಯಗಳಲ್ಲಿ ಅವರ ಸಾಮರ್ಥ್ಯವನ್ನು ಪರೀಕ್ಷಿಸಿರುವುದು ಮುಖ್ಯ ತರಬೇತುದಾರ ಗ್ರಹಾಂ ರೀಡ್ ಅವರ ಉತ್ತಮ ನಿರ್ಧಾರವಾಗಿದೆ. ಒಲಿಂಪಿಕ್ಸ್‌ನ್ನುಮುಂದೂಡಿರುವುದರಿಂದ, ಅಲ್ಪಾವಧಿಯಲ್ಲಿ ಕೆಲಸ ಮಾಡಲು ನಮಗೆ ಸಮಯವಿದೆ’’ ಎಂದರು. ‘‘ಭಾರತಕ್ಕಾಗಿ ಒಲಿಂಪಿಕ್ಸ್‌ನಲ್ಲಿ ಆಡುವುದು ಪ್ರತಿಯೊಬ್ಬ ಕ್ರೀಡಾಪಟು ವಿನ ಗುರಿಯಾಗಿರಬೇಕು ಮತ್ತು ಟೋಕಿಯೊ ಕ್ರೀಡಾಕೂಟಕ್ಕಿಂತ ಮುಂಚೆಯೇ ನಾವು ಉತ್ತಮವಾಗಿರಲು ತಮ್ಮ ಪ್ರಯತ್ನಗಳನ್ನು ಮುಂದುವರಿಸಬೇಕು’’ ಎಂದು ಕಿವಿಮಾತು ನುಡಿದರು.
ಸರ್ದಾರ್ ಅವರು 2014ರ ಏಶ್ಯನ್ ಗೇಮ್ಸ್‌ನಲ್ಲಿ ಭಾರತ ಚಿನ್ನವನ್ನು ಜಯಿಸಿರುವುದನ್ನು ನೆನಪಿಸಿದ್ದಾರೆ. ಅಲ್ಲಿ ಇದು 2016ರ ರಿಯೊ ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯಲು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಸೋಲಿಸಿರುವುದು 12 ವರ್ಷಗಳ ವೃತ್ತಿಜೀವನದಲ್ಲಿ ಎದ್ದುಕಾಣುವ ಕ್ಷಣವಾಗಿದೆ ಎಂದು ಹೇಳಿದರು.







