ಬಾರ್ಸಿಲೋನಕ್ಕೆ 5-0 ಜಯ

ಮ್ಯಾಡ್ರಿಡ್, ಜು.20: ಸ್ಟಾರ್ ಆಟಗಾರ ಲಿಯೊನೆಲ್ ಮೆಸ್ಸಿ ಅವಳಿ ಗೋಲುಗಳ ನೆರವಿನಲ್ಲಿ ಬಾರ್ಸಿಲೋನ ತಂಡ ಲಾ ಲಿಗಾದ ಕೊನೆಯ ಪಂದ್ಯದಲ್ಲಿ ಅಲಾವೆಸ್ ತಂಡವನ್ನು 5-0 ಅಂತರದಲ್ಲಿ ಮಣಿಸಿದೆ.
ಲಿಯೊನೆಲ್ ಮೆಸ್ಸಿ ಎರಡು ಬಾರಿ ಗೋಲು ಗಳಿಸಿದರೆ, ಅನ್ಸು ಫಾಟಿ, ಲೂಯಿಸ್ ಸುಯೆರೆಝ್ ಮತ್ತು ನೆಲ್ಸನ್ ಸೆಮೆಡೊ ತಲಾ 1 ಗೋಲುಗಳ ಕೊಡುಗೆ ನೀಡಿದರು. ಲಾಲಿಗಾ ಪ್ರಶಸ್ತಿಯನ್ನು ಮತ್ತೊಮ್ಮೆ ಗೆಲ್ಲುವಲ್ಲಿ ವಿಫಲವಾಗಿರುವ ಬಾರ್ಸಿಲೋನ ತನ್ನ ನಿರಾಶಾದಾಯಕ ಲಾ ಲಿಗಾ ಅಭಿಯಾನವನ್ನು ರವಿವಾರ ಕೊನೆಗೊಳಿಸಿತು.
ಟೀನೇಜ್ ಫಾರ್ವರ್ಡ್ ಅನ್ಸು ಫಾಟಿ ಮೊದಲಾರ್ಧದ 14ನೇ ನಿಮಿಷದಲ್ಲಿ ಗೋಲು ದಾಖಲಿಸಿ ತಂಡಕ್ಕೆ 1-0 ಮುನ್ನಡೆ ಸಾಧಿಸಲು ನೆರವಾದರು. ಮೆಸ್ಸಿ 24ನೇ ನಿಮಿಷದಲ್ಲಿ ಗೋಲು ದಾಖಲಿಸುವ ಮೂಲಕ ಈ ಋತುವಿನಲ್ಲಿ ದಾಖಲಿಸಿದ ಗೋಲುಗಳ ಸಂಖ್ಯೆಯನ್ನು 25ಕ್ಕೆ ಏರಿಸಿದರು. ಲೂಯಿಸ್ ಸುಯೆರೆಝ್ 44ನೇ ನಿಮಿಷದಲ್ಲಿ ಗೋಲು ಜಮೆ ಮಾಡಿ ತಂಡಕ್ಕೆ 3-0 ಮುನ್ನಡೆ ಸಾಧಿಸಲು ನೆರವಾದರು.
ದ್ವಿತೀಯಾರ್ಧದ ಆರಂಭದಲ್ಲಿ ಡಿಫೆಂಡರ್ ನೆಲ್ಸನ್ ಸೆಮೆಡೊ (57ನೇ ನಿಮಿಷ) ನಾಲ್ಕನೇ ಗೋಲು ಗಳಿಸಿದರು. 75ನೇ ನಿಮಿಷದಲ್ಲಿ ಮೆಸ್ಸಿ ಇನ್ನೊಂದು ಗೋಲು ಜಮೆ ಮಾಡಿದರು. ಇದರೊಂದಿಗೆ ಮೆಸ್ಸಿ ಈ ಋತುವಿನ 26ನೇ ಲೀಗ್ ಗೋಲನ್ನು ಗಳಿಸುವ ಮೂಲಕ ಏಳನೇ ಬಾರಿಗೆ ಅಗ್ರ ಸ್ಕೋರರ್ ಪ್ರಶಸ್ತಿಯನ್ನು ಪಡೆದರು.
ಲಾ ಲಿಗಾದಲ್ಲಿ ಬಾರ್ಸಿಲೋನ 38 ಪಂದ್ಯಗಳಲ್ಲಿ 82 ಪಾಯಿಂಟ್ಸ್ ಗಳಿಸಿದೆ. ಚಾಂಪಿಯನ್ ರಿಯಲ್ ಮ್ಯಾಡ್ರಿಡ್ 38 ಪಂದ್ಯಗಳಲ್ಲಿ 87 ಪಾಯಿಂಟ್ಸ್ ಪಡೆದಿದೆ.







