ವಿವಿಧ ಬೇಡಿಕೆ ಈಡೇರಿಸಲು ಆಗ್ರಹ: ಕೋವಿಡ್ ಆಸ್ಪತ್ರೆಯ ಗುತ್ತಿಗೆ ಕಾರ್ಮಿಕರ ದಿಢೀರ್ ಪ್ರತಿಭಟನೆ
ಬೆಂಗಳೂರು, ಜು.20: ರಾಜಧಾನಿ ಬೆಂಗಳೂರಿನ ವಿಕ್ಟೋರಿಯಾ, ನಿಮ್ಹಾನ್ಸ್ ಆಸ್ಪತ್ರೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಗುತ್ತಿಗೆ ಕಾರ್ಮಿಕರ ಚಿಕಿತ್ಸೆಯಲ್ಲಿ ತಾರತಮ್ಯ ಬೇಡ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಪ್ರತಿಭಟನೆ ನಡೆಸಿದರು.
ಸೋಮವಾರ ಅಖಿಲ ಭಾರತ ಕಾರ್ಮಿಕ ಸಂಘಟನೆಗಳ ಕೇಂದ್ರಿಯ ಸಮಿತಿ ನೇತೃತ್ವದಲ್ಲಿ ಆಸ್ಪತ್ರೆಗಳ ಮುಂಭಾಗ ಜಮಾಯಿಸಿದ ಗುತ್ತಿಗೆ ಕಾರ್ಮಿಕರು, ಕೋವಿಡ್-19 ಸಂಬಂಧ ದಿನದ 24 ಗಂಟೆಯೂ ಕಾರ್ಯ ನಿರ್ವಹಿಸಲಾಗುತ್ತಿದೆ. ಆದರೆ, ಇಲ್ಲಿನ ಸಿಬ್ಬಂದಿಯಲ್ಲಿ ಕೊರೋನ ಸೋಂಕು ಕಾಣಿಸಿಕೊಂಡರೆ, ಚಿಕಿತ್ಸೆ ನೀಡದೆ ತಾರತಮ್ಮ ಮಾಡಲಾಗುತ್ತಿದೆ ಎಂದು ದೂರಿದರು.
850ಕ್ಕೂ ಅಧಿಕ ಗುತ್ತಿಗೆ ಪೌರ ಕಾರ್ಮಿಕರ ಪೈಕಿ 18 ಜನಕ್ಕೆ ಕೋವಿಡ್ ಸೋಂಕು ದೃಢಪಟ್ಟಿದೆ.ಆದರೆ, ಬೇರೆ ಆಸ್ಪತ್ರೆಗಳಿಗೆ ಹೋಗಿ ಚಿಕಿತ್ಸೆ ಪಡೆಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಇನ್ನು, ಹೊಸೂರು ರಸ್ತೆಯಲ್ಲಿರುವ ನಿಮ್ಹಾನ್ಸ್ ಆಸ್ಪತ್ರೆಯ 50 ಬೆಡ್ ಹಾಗೂ ಇನ್ನೊಂದು ಕಟ್ಟಡದ ಆಸ್ಪತ್ರೆಯನ್ನು ಕೇವಲ ಖಾಯಂ ನೌಕರರಿಗೆ ಮೀಸಲಿಡಲಾಗಿದೆ. ಆದರೆ, ಇಲ್ಲಿಯೇ ಕಾರ್ಯನಿರ್ವಹಿಸುವ ಗುತ್ತಿಗೆ ಕಾರ್ಮಿಕರನ್ನು ನಿರ್ಲಕ್ಷ್ಯ ಮಾಡುತ್ತಿದ್ದಾರೆ ಎಂದು ಪ್ರತಿಭಟನಾ ನಿರತರು ಆರೋಪಿಸಿದರು.
ಪಾಸಿಟಿವ್ ಬಂದವರಿಗೆ ಕೋವಿಡ್ ಕೇರ್ ಸೆಂಟರ್ ಅಥವಾ ಸಾಂಸ್ಥಿಕ ಕ್ವಾರಂಟೈನ್ ಸೌಲಭ್ಯ ನೀಡದೆ, ಮನೆಗೆ ಕಳಿಸಲಾಗುತ್ತಿದೆ. ಇದರಿಂದ ಚಿಕ್ಕ ಮನೆಯಲ್ಲಿ ವಾಸವಾಗಿರುವ ಕಾರ್ಮಿಕರು, ತಮ್ಮ ಮನೆಯವರಿಗೂ ಸೋಂಕು ಹಬ್ಬಿಸಿದಂತಾಗುತ್ತದೆ. ಖಾಯಂ ನೌಕರರಿಗೆ ಎಲ್ಲ ಸೌಲಭ್ಯ ಕೊಟ್ಟು, ಗುತ್ತಿಗೆ ನೌಕರರಿಗೆ ನೀಡದೆ ತಾರತಮ್ಯ ಮಾಡಲಾಗುತ್ತಿದೆ ಎಂದು ದೂರಿದರು.
ಸರಿಯಾದ ಚಿಕಿತ್ಸೆ, ಸುರಕ್ಷಾ ಕವಚಗಳು, ಪಿಪಿಇ ಕಿಟ್, ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಯೋಜನೆಯಡಿ 50 ಲಕ್ಷ ವಿಮೆ, ಲಾಕ್‍ಡೌನ್ ಸಮಯದ ವೇತನ ಹಾಗೂ ಕೋವಿಡ್ ಕರ್ತವ್ಯದ ತಿಂಗಳ ವಿಶೇಷ ವೇತನ ನೀಡಬೇಕು. ಆರಂಭದಲ್ಲಿ ಕ್ವಾರಂಟೈನ್ ಸೌಲಭ್ಯ ನೀಡುತ್ತೇವೆ ಎಂದ ನಿಮ್ಹಾನ್ಸ್ ಆಡಳಿತ ವರ್ಗ, ಈಗ ಕೆಲಸದಿಂದ ವಜಾಗೊಳಿಸುವ ಬೆದರಿಕೆ ಹಾಕುತ್ತಿದ್ದಾರೆ ಎಂದು ಕಾರ್ಮಿಕರು ಆತಂಕ ಹೊರಹಾಕಿದರು.







