ಪುತ್ತಿಗೆ ಮಠಾಧೀಶರಿಗೆ ಕೊರೋನ ಪಾಸಿಟಿವ್

ಉಡುಪಿ, ಜು.21: ಉಡುಪಿಯ ಅಷ್ಟಮಠಗಳಲ್ಲಿ ಒಂದಾದ ಪುತ್ತಿಗೆ ಮಠದ ಶ್ರೀಸುಗುಣೇಂದ್ರತೀರ್ಥ ಸ್ವಾಮೀಜಿ ಕೊರೋನ ವೈರಸ್ ಸೋಂಕಿಗೆ ಪಾಸಿಟಿವ್ ಆಗಿದ್ದಾರೆ ಎಂದು ತಿಳಿದುಬಂದಿದೆ.
ಪುತ್ತಿಗೆ ಶ್ರೀ ಸೋಮವಾರ ರಾತ್ರಿ ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಾಗಿದ್ದು, ಅವರು ಆರೋಗ್ಯವಾಗಿದ್ದಾರೆ ಎಂದು ಅವರ ನಿಕಟವರ್ತಿ ಮೂಲಗಳು ತಿಳಿಸಿವೆ.
ಪುತ್ತಿಗೆ ಶ್ರೀ ಎರಡು ವಾರಗಳ ಹಿಂದೆ ಬೆಂಗಳೂರಿಗೆ ತೆರಳಿ ಮರಳಿ ಬಂದಿದ್ದು, ಕೆಲದಿನಗಳ ಹಿಂದೆ ಶೀತ, ಜ್ವರಕ್ಕೆ ತುತ್ತಾಗಿದ್ದರು ಎಂದು ಹೇಳಲಾಗಿದೆ. ಈ ಹಿನ್ನೆಲೆಯಲ್ಲಿ ಅವರ ಗಂಟಲು ದ್ರವದ ಮಾದರಿಯನ್ನು ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿತ್ತು. ಮಾದರಿಯ ವರದಿ ನಿನ್ನೆ ಪಾಸಿಟಿವ್ ಆಗಿ ಬಂದಿದ್ದು, ಹೀಗಾಗಿ ಸ್ವಾಮೀಜಿ ಇಂದು ಕೆಎಂಸಿಗೆ ದಾಖಲಾಗಿದ್ದಾರೆ ಎಂದು ಮೂಲ ತಿಳಿಸಿದೆ.
ಪುತ್ತಿಗೆಶ್ರೀ ಶೀಘ್ರ ಗುಣಮುಖರಾಗಲಿ ಎಂದು ಹಾರೈಸಿ ಭಕ್ತರು ಮಠದಲ್ಲಿ ಹಾಗೂ ಇತರೆಡೆ ವಿಶೇಷ ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.
Next Story





