ಬಸ್ತಿಪಡ್ಪು ಆಮಿನಾ ಉಮ್ಮ
ಮಂಗಳೂರು, ಜು.21: ಉಳ್ಳಾಲ ಬಸ್ತಿಪಡ್ಪುನಿವಾಸಿ ದಿ. ಮೂಸಾ ಅವರ ಪತ್ನಿ, ಆಮಿನಾ ಉಮ್ಮ (62) ಸೋಮವಾರ ಸಂಜೆ ಸ್ವಗೃಹದಲ್ಲಿ ನಿಧನರಾದರು.
ಕಳೆದ 42 ವರ್ಷಗಳಿಂದ ಸಾವಿರಾರು ಮಹಿಳೆಯರ ಮಯ್ಯತ್ ಸ್ನಾನ, ಅನಾರೋಗ್ಯಪೀಡಿತರ ಆರೈಕೆ, ಆರ್ಥಿಕವಾಗಿ ಹಿಂದುಳಿದವರ ಮನೆ ನಿರ್ಮಾಣಕ್ಕೆ ದಾನಿಗಳಿಂದ ನೆರವು ಕೊಡಿಸುವ ಮೂಲಕ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದ ಆಮಿನಾ ಅವರು ಪರಿಸರದಲ್ಲಿ ‘ಆಮಿನಾ ಉಮ್ಮಾ’ ಎಂದೇ ಗುರುತಿಸಲ್ಪಟ್ಟಿದ್ದರು. ಸಾತ್ವಿಕ ಗುಣ ಸ್ವಭಾವ, ಅಪಾರ ಧಾರ್ಮಿಕ ಜ್ಞಾನ ಮತ್ತು ಆಮಿನಾ ಉಮ್ಮ ಮತಪ್ರವಚನ, ಕುರ್‌ಆನ್,ಹದೀಸ್ ತರಗತಿಗಳಿಗೆ ತಪ್ಪದೆ ಹಾಜರಾಗುವ ಮೂಲಕ ಇತರರಿಗೆ ಮಾದರಿಯಾಗಿದ್ದರು.
ಉಳ್ಳಾಲದ ಕಡಲಲ್ಲಿ ತೇಲಿ ಬರುವ ಅಪರಿಚಿತ ಮಹಿಳೆಯರ ಅದರಲ್ಲೂ ಕೊಳೆತ ಮೃತದೇಹಗಳ ಅಂತ್ಯಕ್ರಿಯೆಗೆ ಸಂಬಂಧಿಸಿದ ವಿಧಿವಿಧಾನಗಳನ್ನು ನಿರ್ವಹಿಸುವಲ್ಲಿ ಆಮಿನಾ ಉಮ್ಮ ಮುಂಚೂಣಿಯಲ್ಲಿದ್ದರು. ಅವರಿಂದ ಪ್ರೇರಿತರಾದ ಹಲವು ಮಂದಿ ಸ್ಥಳೀಯ ಮಹಿಳೆಯರು ಮಯ್ಯತ್ ಸ್ನಾನ ಮಾಡಿಸಲು ಆಸಕ್ತಿ ವಹಿಸಿದ್ದ ಬಗ್ಗೆ ಸ್ಥಳೀಯರು ನೆನಪಿಸುತ್ತಾರೆ.
ಮೃತರು ಇಂಡಿಯನ್ ಸೋಶಿಯಲ್ ಫೋರಮ್ ಕುವೈತ್ ಕರ್ನಾಟಕ ರಾಜ್ಯ ಸಮಿತಿಯ ಸದಸ್ಯ ತಮೀಮ್ ಉಳ್ಳಾಲ್, ಸಮಾಜ ಸೇವಕ ಅಲ್ತಾಫ್ ಉಳ್ಳಾಲ್ ಸಹಿತ ನಾಲ್ವರು ಪುತ್ರರು, ಇಬ್ಬರು ಪುತ್ರಿಯರ ಸಹಿತ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.







