ಬಿಳಿ ಮತ್ತು ಬಿಳಿಯೇತರ ಚರ್ಮದ ರೋಗ ಲಕ್ಷಣಗಳು ಭಿನ್ನ ಎಂದು ಸಾಧಿಸಿದ ಕರಿಯ ವೈದ್ಯಕೀಯ ವಿದ್ಯಾರ್ಥಿ
ವೈದ್ಯರಿಗೆ ಸಹಕಾರಿಯಾಗಲು ಕೈಪಿಡಿ ರಚನೆ

ಚಿತ್ರ ಕೃಪೆ: medscape.com
ಲಂಡನ್ : ಲಂಡನ್ ವಿಶ್ವವಿದ್ಯಾಲಯದ ಸೈಂಟ್ ಜಾರ್ಜ್ ವೈದ್ಯಕೀಯ ಕಾಲೇಜಿನ ದ್ವಿತೀಯ ವರ್ಷದ ವಿದ್ಯಾರ್ಥಿ, ಕಪ್ಪುವರ್ಣೀಯರಾಗಿರುವ ಮಲೋನ್ ಮುಕ್ವೆಂಡೆ ಎಂಬವರು ಬಿಳಿಯೇತರ (ಕರಿಯ ಮತ್ತು ಕಂದು ಬಣ್ಣದ ಚರ್ಮಗಳು) ಚರ್ಮದವರಲ್ಲಿನ ಚರ್ಮದ ಸಮಸ್ಯೆಗಳನ್ನು ಗುರುತಿಸಲು ಭವಿಷ್ಯದ ವೈದ್ಯರುಗಳಿಗೆ ಸಹಕಾರಿಯಾಗುವ ಕೈಪಿಡಿಯೊಂದನ್ನು ರಚಿಸಿದ್ದಾರೆ. ಅಲ್ಲಿನ ವೈದ್ಯಕೀಯ ಕಾಲೇಜುಗಳಲ್ಲಿ ಕೇವಲ ಶ್ವೇತವರ್ಣೀಯರ ಚರ್ಮದ ಸಮಸ್ಯೆಗಳನ್ನು ಹೇಗೆ ಪತ್ತೆ ಹಚ್ಚುವುದು ಎಂಬುದನ್ನು ಮಾತ್ರ ಕಲಿಸಲಾಗುತ್ತಿರುವ ಈ ಸಂದರ್ಭದಲ್ಲಿ ಈ ಕೈಪಿಡಿ ವರದಾನವಾಗುವ ಸಾಧ್ಯತೆಯಿದೆ.
ಅವರ ಕೈಪಿಡಿ - 'ಮೈಂಡ್ ದಿ ಗ್ಯಾಪ್' ಗಾಢ ವರ್ಣೀಯರ (ಕರಿಯ ಮತ್ತು ಕಂದು ವರ್ಣೀಯರು) ಗಂಭೀರ ಚರ್ಮದ ಸಮಸ್ಯೆಗಳನ್ನು ಹೇಗೆ ಗುರುತಿಸಬಹುದು ಎಂಬುದನ್ನು ವಿವರಿಸುತ್ತದೆ.
ಒಂದು ನಿರ್ದಿಷ್ಟ ಚರ್ಮದ ಸಮಸ್ಯೆ ಶ್ವೇತವರ್ಣೀಯರಲ್ಲಿ ಹಾಗೂ ಗಾಢ ವರ್ಣೀಯರ ಚರ್ಮದಲ್ಲಿ ಹೇಗೆ ಕಾಣಿಸುತ್ತದೆ ಎಂದು ವಿವರಿಸುವ ಚಿತ್ರಗಳು ಈ ಪುಸ್ತಕದಲ್ಲಿದೆ.
"ಕಾಲೇಜಿನಲ್ಲಿ ಶಿಕ್ಷಣ ಆರಂಭಿಸಿದಾಗಲೇ ನಮಗೆ ಚರ್ಮದ ಸಮಸ್ಯೆಗಳ ಕುರಿತು ವಿವರಿಸುವಾಗ ಗಾಢ ವರ್ಣದವರ ಚರ್ಮಗಳಲ್ಲಿ ಈ ಸಮಸ್ಯೆಗಳನ್ನು ಹೇಗೆ ಪತ್ತೆ ಹಚ್ಚುವುದು ಎಂದು ವಿವರಿಸಲಾಗುತ್ತಿಲ್ಲ ಎಂಬುದು ನನ್ನ ಗಮನಕ್ಕೆ ಬಂತು,'' ಎಂದು ಮಲೋನ್ ಹೇಳುತ್ತಾರೆ.
ಮಲೋನ್ ಅವರ ಕೃತಿಯನ್ನು ಅವರ ಸಂಸ್ಥೆ ಕೂಡ ಬೆಂಬಲಿಸಿದ್ದು ಅವರಿಗೆ ಈ ಕೃತಿಯ ಮುದೃಣಕ್ಕೆ ಕೆಲ ಉಪನ್ಯಾಸಕರ ಸಹಾಯವೂ ದೊರೆಯುವಂತೆ ಮಾಡಿದೆ.
ಕ್ಲಿನಿಕಲ್ ಶಿಕ್ಷಣದ ವೇಳೆ ಬಿಎಎಂಇ (ಕರಿವರ್ಣೀಯರ, ಏಷ್ಯನ್ನರ ಹಾಗೂ ಅಲ್ಪಸಂಖ್ಯಾತ ಜನಾಂಗೀಯರ) ಪ್ರಾತಿನಿಧ್ಯವನ್ನೂ ಒಳಪಡಿಸಬೇಕೆಂದು ಇಂಗ್ಲೆಂಡ್ನ ವೈದ್ಯಕೀಯ ಶಿಕ್ಷಣ ಸಂಸ್ಥೆಗಳನ್ನು ಆಗ್ರಹಿಸುವ ಮನವಿಗೆ 1.86 ಲಕ್ಷಕ್ಕೂ ಅಧಿಕ ಮಂದಿ ಸಹಿ ಹಾಕಿದ ನಂತರದ ಬೆಳವಣಿಗೆಯಲ್ಲಿ ಮಲೋನ್ ಅವರ ಕೃತಿ ಬಂದಿದೆ. ಅದು ಮುಂದಿನ ತಿಂಗಳುಗಳಲ್ಲಿ ಬಿಡುಗಡೆಗೊಳ್ಳುವ ನಿರೀಕ್ಷೆಯಿದೆ.







