ಕೊರೋನ ಲಸಿಕೆ: 30ರಿಂದ 40 ಕೋಟಿ ಡೋಸ್ ಡಿಸೆಂಬರ್ ಒಳಗೆ ಸಿದ್ಧ: ಪೂನಾವಲ್ಲಾ

ಸಾಂದರ್ಭಿಕ ಚಿತ್ರ
ಹೊಸದಿಲ್ಲಿ, ಜು. 21: ಆಸ್ಟ್ರಾಝೆನೆಕಾ ಹಾಗೂ ಆಕ್ಸ್ಫರ್ಡ್ ವಿಶ್ವವಿದ್ಯಾನಿಲಯ ಅಭಿವೃದ್ಧಿಪಡಿಸಿದ ಕೊರೋನಾ ಲಸಿಕೆಯ ಕ್ಲಿನಿಕಲ್ ಟ್ರಯಲ್ನಲ್ಲಿ ಉತ್ತೇಜನಕಾರಿ ಫಲಿತಾಂಶ ಬಂದಿರುವುದರಿಂದ ಕನಿಷ್ಠ 30ರಿಂದ 40 ಕೋಟಿ ಡೋಸ್ಗಳಷ್ಟು ಲಸಿಕೆ ಡಿಸೆಂಬರ್ ಒಳಗೆ ಸಿದ್ಧವಾಗಲಿದೆ ಎಂದು ಸಿರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ (ಎಸ್ಐಐ)ದ ಅಡಾರ್ ಪೂನಾವಲ್ಲಾ ಹೇಳಿದ್ದಾರೆ.
ಖಾಸಗಿ ಸುದ್ದಿ ವಾಹಿನಿಯೊಂದರ ಸಂದರ್ಶನದಲ್ಲಿ ಮಂಗಳವಾರ ಮಾತನಾಡಿದ ಅವರು, 30 ಕೋಟಿಯಿಂದ 40 ಕೋಟಿ ‘ಕೋವಿಶೀಲ್ಡ್’ ಲಸಿಕೆ ಡಿಸೆಂಬರ್ ಒಳಗೆ ಸಿದ್ಧವಾಗಲಿದೆ ಎಂದು ತಿಳಿಸಿದ್ದಾರೆ. ಭಾರತದಲ್ಲಿ ಈ ಲಸಿಕೆಗೆ 1,000 ರೂಪಾಯಿ ಬೆಲೆ ಇರಲಿದೆ ಎಂದು ಅಡಾರ್ ಪೂನಾವಲ್ಲಾ ಹೇಳಿದ್ದಾರೆ. ಕೊರೋನ ವೈರಸ್ ಲಸಿಕೆ ಸಿದ್ಧವಾದ ಬಳಿಕ ಅದನ್ನು ಉತ್ಪಾದಿಸಲು ಜಗತ್ತಿನ ಅತಿ ದೊಡ್ಡ ಲಸಿಕೆ ಉತ್ಪಾದಕ ಕಂಪೆನಿಯಾಗಿರುವ ಎಸ್ಐಐ ಹಾಗೂ ಅದರ ಪಾಲುದಾರ ಸಂಸ್ಥೆಯಾದ ಅಸ್ಟ್ರಾಝೆನೆಕಾವನ್ನು ಆಕ್ಸ್ಫರ್ಡ್ ಆಯ್ಕೆ ಮಾಡಿಕೊಂಡಿದೆ.
‘‘ಕೊರೋನಾ ವೈರಾಣು ಲಸಿಕೆಯ ಕ್ಲಿನಿಕಲ್ ಟ್ರಯಲ್ನಲ್ಲಿ ಉತ್ತಮ ಫಲಿತಾಂಶ ಬಂದಿದೆ. ಇದರಿಂದ ನಮಗೆ ತುಂಬಾ ಸಂತೋಷವಾಗಿದೆ. ನಾವು ಒಂದು ವಾರದ ಒಳಗೆ ಭಾರತೀಯ ಔಷಧ ನಿಯಂತ್ರಕರಿಗೆ ಪರವಾನಿಗೆ ಟ್ರಯಲ್ ಕೋರಿ ಪತ್ರ ಬರೆಯಲಿದ್ದೇವೆ. ಅನುಮತಿ ದೊರಕಿದ ಕೂಡಲೇ ನಾವು ಭಾರತದಲ್ಲಿ ಈ ಲಸಿಕೆಯ ಕ್ಲಿನಿಕಲ್ ಟ್ರಯಲ್ ಆರಂಭಿಸಲಿದ್ದೇವೆ. ಅನಂತರ ಈ ಲಸಿಕೆಯನ್ನು ದೊಡ್ಡ ಪ್ರಮಾಣದಲ್ಲಿ ಉತ್ಪಾದಿಸಲಿದ್ದೇವೆ’’ ಎಂದು ಅಡಾರ್ ಪೂನಾವಲ್ಲಾ ಹೇಳಿದ್ದಾರೆ.







