ಮುಖಪುಟದಲ್ಲಿ ಮಾಸ್ಕ್ ಇರಿಸಿ ಜಾಗೃತಿ ಮೂಡಿಸಿದ ಉರ್ದು ದಿನಪತ್ರಿಕೆ

ಫೋಟೊ ಕೃಪೆ: twitter.com/Ieshan_W/
ಹೊಸದಿಲ್ಲಿ, ಜು. 21: ಕೊರೋನ ಕುರಿತು ಜಾಗೃತಿ ಮೂಡಿಸುವ ಪ್ರಯತ್ನವಾಗಿ ಹಾಗೂ ಮಾಸ್ಕ್ ಧರಿಸುವಂತೆ ಓದುಗರನ್ನು ಉತ್ತೇಜಿಸಲು ಜಮ್ಮು ಹಾಗೂ ಕಾಶ್ಮೀರದ ಸ್ಥಳೀಯ ಉರ್ದು ದಿನ ಪತ್ರಿಕೆ ‘ರೋಶ್ನಿ’ ತನ್ನ ಓದುಗರಿಗೆ ಉಚಿತ ಮಾಸ್ಕ್ ವಿತರಿಸಿದೆ.
ಪತ್ರಿಕೆ ಓದುಗರಿಗೆ ಅಚ್ಚರಿಯಾಗುವಂತೆ ಮಾಸ್ಕ್ ಅನ್ನು ಮುಖ ಪುಟದಲ್ಲಿ ಅಂಟಿಸಿದೆ. ಅಲ್ಲದೆ, ಅದರ ಕೆಳಗೆ ‘ಮಾಸ್ಕ್ ಬಳಸುವುದು ಮುಖ್ಯ’ ಎಂದು ಮುದ್ರಿಸಿದ್ದಾರೆ. ‘‘ಈ ಸಂದರ್ಭ ಸಾರ್ವಜನಿಕರಿಗೆ ಈ ಸಂದೇಶ ನೀಡುವುದು ಮುಖ್ಯವಾದುದು ಎಂಬುದು ನಮ್ಮ ಭಾವನೆ. ಮಾಸ್ಕ್ ಧರಿಸುವುದು ಮುಖ್ಯ ಎನ್ನುವುದನ್ನು ಅರ್ಥ ಮಾಡಿಸಲು ಇದು ಉತ್ತಮ ದಾರಿ’’ ಎಂದು ರೋಶ್ನಿಯ ಸಂಪಾದಕ ಝಹೂರ್ ಶೋರಾ ಹೇಳಿದ್ದಾರೆ.
ಪ್ರಕಾಶಕರ ಈ ನಡೆಯ ಬಗ್ಗೆ ಸಾಮಾಜಿಕ ಜಾಲ ತಾಣದಲ್ಲಿ ವ್ಯಾಪಕ ಪ್ರಶಂಶೆ ವ್ಯಕ್ತವಾಗಿದೆ. ‘‘ದಿನಪತ್ರಿಕೆಯ ಬೆಲೆ 2 ರೂಪಾಯಿ. ಪ್ರಕಾಶಕರು ಪತ್ರಿಕೆಯೊಂದಿಗೆ ಮಾಸ್ಕ್ ಅನ್ನು ನೀಡಿದ್ದಾರೆ. ಇದರ ಉದ್ದೇಶ ಜನರಲ್ಲಿ ಮಾಸ್ಕ್ ಕುರಿತು ಜಾಗೃತಿ ಮೂಡಿಸುವುದು’’ ಎಂದು ಶ್ರೀನಗರದ ನಿವಾಸಿ ಝುಬೈರ್ ಅಹ್ಮದ್ ಹೇಳಿದ್ದಾರೆ.





