ಸೀಲ್‍ಡೌನ್ ಪ್ರದೇಶ ನಿರ್ಬಂಧ ಮುಂದುವರಿಕೆ: ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್
"ಎಲ್ಲ ಪೌರಕಾರ್ಮಿಕರಿಗೂ ಕೊರೋನ ಟೆಸ್ಟ್"

ಬೆಂಗಳೂರು, ಜು.21: ನಗರದಲ್ಲಿ ಅತಿ ಹೆಚ್ಚು ಸೋಂಕಿತರು ಕಂಡು ಬಂದಿರುವ ಸೀಲ್ ಡೌನ್ ಪ್ರದೇಶಗಳ ನಿರ್ಬಂಧ ಮುಂದುವರಿಯಲಿದೆ. ಅಲ್ಲದೇ ಮಾಸ್ಕ್ ಧರಿಸದೇ ಸಂಚಾರ ಮಾಡುವವರಿಗೆ ಈಗಿರುವ ದಂಡದ 5 ಪಟ್ಟು ದಂಡ ಹೆಚ್ಚಳ ಮಾಡುವಂತೆ ಮುಖ್ಯಮಂತ್ರಿಗಳಿಗೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಬಿಬಿಎಂಪಿ ಆಯುಕ್ತ ಎನ್. ಮಂಜುನಾಥ್ ಪ್ರಸಾದ್ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲಾಕ್‍ಡೌನ್ ಮುಕ್ತಾಯಗೊಂಡರೂ, ಅದಕ್ಕಿಂತ ಮುಂಚೆ ಸೀಲ್‍ಡೌನ್ ಮಾಡಲಾಗಿದ್ದ ಪ್ರದೇಶಗಳಲ್ಲಿ ನಿರ್ಬಂಧ ಮುಂದುವರಿಯುತ್ತದೆ. ಜತೆಗೆ ಕೆ.ಆರ್. ಮಾರುಕಟ್ಟೆ, ಕಲಾಸಿಪಾಳ್ಯ, ಯಶವಂತಪುರ, ಸಿಂಗೇನ ಅಗ್ರಹಾರ ಹಾಗೂ ಅತಿ ಹೆಚ್ಚು ಸೋಂಕಿತರು ಪತ್ತೆಯಾಗಿರುವ ವಿ.ವಿ.ಪುರ, ಚಿಕ್ಕಪೇಟೆ, ಚಾಮರಾಜಪೇಟೆ, ಧರ್ಮರಾಯ ಸ್ವಾಮಿ ವಾರ್ಡ್‍ಗಳ ಕೆಲವು ರಸ್ತೆಗಳಲ್ಲಿ ಸೀಲ್‍ಡೌನ್ ಜಾರಿಯಲ್ಲಿರುತ್ತದೆ. ಜನರು ನಿಯಮ ಪಾಲನೆ ಮಾಡಬೇಕು ಎಂದರು.
ಮಾಸ್ಕ್ ದಂಡ 5 ಪಟ್ಟು ಹೆಚ್ಚಳ: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಬುಧವಾರ ಪಾಲಿಕೆಯ 4 ವಲಯಗಳಲ್ಲಿ ಕೊರೋನ ನಿಯಂತ್ರಣಕ್ಕೆ ಕೈಗೊಳ್ಳಲಾದ ಕಾರ್ಯದ ಬಗ್ಗೆ ಪರಿಶೀಲನೆ ನಡೆಸಲಿದ್ದಾರೆ. ನಂತರ ಅಧಿಕಾರಿಗಳ ಸಭೆ ನಡೆಯಲಿದ್ದು, ಈ ವೇಳೆ ಮಾಸ್ಕ್ ಹಾಕದೆ ಸಂಚಾರ ಮಾಡುವುದು, ಸುರಕ್ಷಿತ ಅಂತರ ಪಾಲಿಸದಿರುವುದು ಸೇರಿ ಕೋವಿಡ್ ನಿಯಮಾವಳಿ ಮೀರುವವರಿಗೆ ಈಗಿರುವ ದಂಡದ ಮೊತ್ತ(ಪ್ರಸ್ತುತ 200 ರೂ.)ವನ್ನು 5 ಪಟ್ಟು ಹೆಚ್ಚಳ ಮಾಡಲು ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಮಾಹಿತಿ ನೀಡಿದರು.
ಲಾಕ್‍ಡೌನ್ ತೆರವಿಗೆ ಸಂಘಟನೆಗಳಿಂದ ಬೇಡಿಕೆ: ಪ್ರಮುಖ ಮಾರುಕಟ್ಟೆ ಸ್ಥಳಗಳಾದ ಚಿಕ್ಕಪೇಟೆ, ಬಳೇಪೇಟೆ, ಕಾಟನ್ ಪೇಟೆ ಸೇರಿ ವಿವಿಧೆಡೆ ಅಲ್ಲಿನ ವ್ಯಾಪಾರಿ ಸಂಘಟನೆಗಳು ಸ್ವಯಂ ಲಾಕ್‍ಡೌನ್ ಮಾಡಬೇಕು ಎಂದು ಬಿಬಿಎಂಪಿಗೆ ಮನವಿ ಸಲ್ಲಿಸಿದ್ದರು. ಈಗ ನಿರ್ಬಂಧ ತೆರವುಗೊಳಿಸಲು ಬೇಡಿಕೆಯಿಟ್ಟಿದ್ದಾರೆ. ಆದರೆ, ಮಾರುಕಟ್ಟೆ ಪ್ರದೇಶದಲ್ಲಿ ವ್ಯಾಪಾರ ಮಾಡುತ್ತಿದ್ದ 50 ವರ್ಷ ಮೇಲ್ಪಟ್ಟವರಿಗೆ ಹೆಚ್ಚಾಗಿ ಸೋಂಕು ಕಾಣಿಸಿಕೊಂಡಿದೆ. ಹೀಗಾಗಿ, ವ್ಯಾಪಾರಿ ಸಂಘಟನೆ ವತಿಯಿಂದ ಸೋಂಕು ಹರಡದಂತೆ ಯಾವ ಕ್ರಮಗಳನ್ನು ಅನುಸರಿಸಲು ಸಿದ್ಧರಿದ್ದಾರೆ ಎಂಬುದನ್ನು ನೋಡಿಕೊಂಡು ನಿರ್ಬಂಧ ತೆರವುಗೊಳಿಸಲು ತೀರ್ಮಾನಿಸಲಾಗುವುದು ಎಂದು ತಿಳಿಸಿದರು.
ಆಸ್ಪತ್ರೆಗಳಿಗೆ ವಿಪತ್ತು ನಿರ್ವಹಣೆ ಕಾಯ್ದೆಯಡಿ ಪ್ರಕರಣ
ನಗರದಲ್ಲಿ 291 ಖಾಸಗಿ ಆಸ್ಪತ್ರೆಗಳು ಕಾರ್ಯನಿರ್ವಹಿಸುತ್ತಿದ್ದು, ಸರಕಾರ ಸೂಚಿಸಿದ ಶೇ.50 ಹಾಸಿಗೆಗಳನ್ನು ಕೋವಿಡ್ ಚಿಕಿತ್ಸೆಗೆ ನೀಡಿಲ್ಲ. ಹೀಗಾಗಿ ಎಲ್ಲ ಆಸ್ಪತ್ರೆಗಳಿಗೂ ಜು.20ರಂದು ಶೋಕಾಸ್ ನೋಟೀಸ್ ಜಾರಿಗೊಳಿಸಲಾಗಿದೆ. ಜು.22ರ ಒಳಗಾಗಿ ಶೇ.50 ಹಾಸಿಗೆ ಒದಗಿಸಿರುವ ಬಗ್ಗೆ ಮಾಹಿತಿ ನೀಡಬೇಕು. ನಿರ್ಲಕ್ಷ್ಯ ಮಾಡುವ ಖಾಸಗಿ ಆಸ್ಪತ್ರೆಗಳ ವಿರುದ್ಧ, ವಿಪತ್ತು ನಿರ್ವಹಣಾ ಕಾಯ್ದೆ ಅನುಸಾರ ಪ್ರಕರಣ ದಾಖಲಿಸಲಾಗುವುದು. ಈ ಕಾಯ್ದೆಯಡಿ, ಒಮ್ಮೆ ಪ್ರಕರಣ ದಾಖಲಾದರೆ ಅದರಿಂದಾಗುವ ಪರಿಣಾಮಗಳನ್ನು ಆಸ್ಪತ್ರೆಯವರು ಎದುರಿಸಬೇಕಾಗುತ್ತದೆ ಎಂದು ಮಂಜುನಾಥ್ ಪ್ರಸಾದ್ ಎಚ್ಚರಿಕೆ ನೀಡಿದರು.
ಎಲ್ಲ ಪೌರಕಾರ್ಮಿಕರಿಗೂ ಕೊರೋನ ಟೆಸ್ಟ್
ಬಿಬಿಎಂಪಿ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲ ಪೌರಕಾರ್ಮಿಕರಿಗೆ ಕೊರೋನ ಪರೀಕ್ಷೆ ಮಾಡಿಸಲಾಗುವುದು. ಅಲ್ಲದೆ ಪೌರಕಾರ್ಮಿಕರಿಗೆ ಕೊರೋನ ಹಡರದಂತೆ ಜಾಗೃತಿ ವಹಿಸಲಾಗುವುದು ಎಂದು ಆಯುಕ್ತರು ತಿಳಿಸಿದರು.







