ಕೊರೋನ ಸೋಂಕಿನ ನಡುವೆಯೇ 24 ಸಾವಿರ ಪ್ರಕರಣ ಇತ್ಯರ್ಥಪಡಿಸಿದ ರಾಜ್ಯದ ಕೋರ್ಟ್ ಗಳು

ಬೆಂಗಳೂರು, ಜು.21: ಕೊರೋನ ವೈರಸ್ ಸೋಂಕಿನ ಹಾವಳಿ ಮಧ್ಯೆಯೆ ರಾಜ್ಯದ ನ್ಯಾಯಾಲಯಗಳು ಕಳೆದ ಜೂನ್ ತಿಂಗಳಿನಲ್ಲಿ 24 ಸಾವಿರ ಪ್ರಕರಣಗಳನ್ನು ಇತ್ಯರ್ಥಪಡಿಸಿವೆ ಎಂದು ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ ರಾಜೇಂದ್ರ ಬಾದಾಮಿಕರ್ ಮಾಹಿತಿ ನೀಡಿದ್ದಾರೆ.
ರಾಜ್ಯದ ಜಿಲ್ಲಾ ಮತ್ತು ವಿಚಾರಣಾ ನ್ಯಾಯಾಲಯಗಳಲ್ಲಿ ಅರ್ಜಿಗಳ ವಿಚಾರಣೆ ನಡೆದಿದೆ. ಜೂ.1ರಿಂದ 30ರವರೆಗೆ ಒಟ್ಟು 24,781 ಪ್ರಕರಣಗಳನ್ನು ಇತ್ಯರ್ಥಪಡಿಸಿವೆ. ಹೈಕೋರ್ಟ್ ರೂಪಿಸಿರುವ ಎಸ್‍ಓಪಿ ಮಾರ್ಗಸೂಚಿಗಳ ಅಡಿ ಎಲ್ಲ ನ್ಯಾಯಾಲಯಗಳು ಕಾರ್ಯ ನಿರ್ವಹಿಸಿವೆ.
ಕೊರೋನ ಭೀತಿಯ ಮಧ್ಯೆಯೆ ನ್ಯಾಯಾಲಯದ ಅಧಿಕಾರಿಗಳು ಮತ್ತು ಸಿಬ್ಬಂದಿ ಕಾರ್ಯ ನಿರ್ವಹಿಸಿದ್ದಾರೆ. ಜೂನ್ ತಿಂಗಳಿನಲ್ಲಿ ರಾಜ್ಯದ ಎಲ್ಲ ಜಿಲ್ಲಾ ಮತ್ತು ವಿಚಾರಣಾ ನ್ಯಾಯಾಲಯಗಳಲ್ಲಿ 52,172 ಪ್ರಕರಣಗಳು ದಾಖಲಾಗಿದ್ದವು. ಇ-ಫೈಲಿಂಗ್ ಮೂಲಕ 5731 ಪ್ರಕರಣಗಳು ದಾಖಲಾಗಿದ್ದವು ಎಂದು ಮಾಹಿತಿ ನೀಡಿದ್ದಾರೆ.
ಇನ್ನು ರಾಜ್ಯಾದ್ಯಂತ ವಕೀಲರು ಮತ್ತು ಕಕ್ಷಿದಾರರ ಕೋರಿಕೆ ಹಿನ್ನೆಲೆ 4,05,284 ಪ್ರಕರಣಗಳನ್ನು ನ್ಯಾಯಾಲಯಗಳ ಮುಂದೆ ವಿಚಾರಣೆಗೆ ನಿಗದಿಪಡಿಸಲಾಗಿತ್ತು. ಇವುಗಳಲ್ಲಿ 14,653 ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ. ಹಾಗೆಯೇ 10,128 ಮಧ್ಯಂತರ ಅರ್ಜಿಗಳನ್ನೂ ಇತ್ಯರ್ಥಪಡಿಸಲಾಗಿದೆ ಎಂದು ರಿಜಿಸ್ಟ್ರಾರ್ ಜನರಲ್ ರಾಜೇಂದ್ರ ಬಾದಾಮಿಕರ್ ತಿಳಿಸಿದ್ದಾರೆ.







