ಮನೆ ಬಾಗಿಲಿಗೆ ಪಡಿತರ ಯೋಜನೆಗೆ ದಿಲ್ಲಿ ಸಂಪುಟ ಅನುಮೋದನೆ
ಹೊಸದಿಲ್ಲಿ, ಜು. 21: ಅರ್ಹ ಫಲಾನುಭವಿಗಳಿಗೆ ಮನೆ ಬಾಗಿಲಿಗೆ ಪಡಿತರ ಪೂರೈಸುವ ಯೋಜನೆಗೆ ದಿಲ್ಲಿ ಸರಕಾರ ಮಂಗಳವಾರ ಅನುಮತಿ ನೀಡಿದೆ ಎಂದು ಘೋಷಿಸಿರುವ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಇದನ್ನು ಕ್ರಾಂತಿಕಾರಿ ನಡೆ ಎಂದಿದ್ದಾರೆ.
ಈ ಯೋಜನೆಯನ್ನು ‘‘ಮುಖ್ಯಮಂತ್ರಿ ಮನೆ ಮನೆಗೆ ಪಡಿತರ ಯೋಜನೆ’’ ಎಂದು ಕರೆಯಲಾಗಿದೆ ಎಂದು ಅವರು ಹೇಳಿದ್ದಾರೆ. ದಿಲ್ಲಿ ಸಂಪುಟ ಸಭೆಯಲ್ಲಿ ಅನುಮೋದನೆ ಪಡೆದುಕೊಂಡ ಈ ಯೋಜನೆ ಟೆಂಡರ್ ಪ್ರಕ್ರಿಯೆ ಹಾಗೂ ಇತರ ಅಗತ್ಯತೆಗಳನ್ನು ಪೂರೈಸಿದ ಬಳಿಕ ಮುಂದಿನ 6-7 ತಿಂಗಳಲ್ಲಿ ಅಸ್ತಿತ್ವಕ್ಕೆ ಬರಲಿದೆ. ಈ ಯೋಜನೆ ಅಡಿಯಲ್ಲಿ ಗೋಧಿ, ಅಕ್ಕಿ, ಹಾಗೂ ಸಕ್ಕರೆಯನ್ನು ಶುದ್ಧವಾಗಿ ಬ್ಯಾಗ್‌ಗಳಲ್ಲಿ ಪ್ಯಾಕ್ ಮಾಡಿ ಜನರ ಮನೆ ಬಾಗಿಲಿಗೆ ತಲುಪಿಸಲಾಗುವುದು.
ಪಿಡಿಎಸ್ ಅಂಗಡಿಯಿಂದ ಪಡಿತರ ಪಡೆದುಕೊಳ್ಳುವುದು ಜನರಿಗೆ ಬಿಟ್ಟದ್ದು ಎಂದು ಅವರು ವರ್ಚುವಲ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಮನೆ ಬಾಗಿಲಿಗೆ ಪಡಿತರ ವಿತರಣೆ ಯೋಜನೆಯೊಂದಿಗೆ ‘ಒಂದು ದೇಶ ಒಂದು ಪಡಿತರ ಕಾರ್ಡ್’ ಯೋಜನೆ ಕೂಡ ಜಾರಿಗೆ ಬರಲಿದೆ ಎಂದು ಅರವಿಂದ್ ಕೇಜ್ರಿವಾಲ್ ತಿಳಿಸಿದ್ದಾರೆ.





