ಉಯಿಘರ್ ಮಾನವಹಕ್ಕುಗಳ ಉಲ್ಲಂಘನೆ: 11 ಚೀನೀ ಉದ್ಯಮಗಳು ಕಪ್ಪುಪಟ್ಟಿಗೆ; ಅಮೆರಿಕ ಘೋಷಣೆ

ವಾಶಿಂಗ್ಟನ್, ಜು. 21: ಚೀನಾದ ಉಯಿಘರ್ ಅಲ್ಪಸಂಖ್ಯಾತರ ಮಾನವಹಕ್ಕುಗಳ ಉಲ್ಲಂಘನೆಯಲ್ಲಿ ಶಾಮೀಲಾಗಿರುವುದಕ್ಕಾಗಿ ಚೀನಾದ 11 ಉದ್ಯಮಗಳನ್ನು ಕಪ್ಪುಪಟ್ಟಿಗೆ ಸೇರಿಸಿರುವುದಾಗಿ ಅಮೆರಿಕದ ವಾಣಿಜ್ಯ ಇಲಾಖೆ ಸೋಮವಾರ ಘೋಷಿಸಿದೆ. ಈ ಉದ್ಯಮಗಳಿಗೆ ಇನ್ನು ಮುಂದೆ ಅಮೆರಿಕದಿಂದ ಯಾವುದೇ ವಸ್ತುಗಳನ್ನು ಪಡೆದುಕೊಳ್ಳಲು ಸಾಧ್ಯವಾಗುವುದಿಲ್ಲ.
ಚೀನಾದ ಪಶ್ಚಿಮ ಕ್ಸಿನ್‌ಜಿಯಾಂಗ್ ವಲಯದಲ್ಲಿರುವ ಉಯಿಘರ್ ಜನಾಂಗೀಯ ಗುಂಪಿಗೆ ಸೇರಿದ ಕನಿಷ್ಠ 10 ಲಕ್ಷ ಮುಸ್ಲಿಮರನ್ನು ಚೀನಾವು ಬಂಧನ ಕೇಂದ್ರಗಳಲ್ಲಿ ಇಟ್ಟಿದೆ ಎಂಬುದಾಗಿ ಅಮೆರಿಕ, ಹಲವು ಪಾಶ್ಚಾತ್ಯ ದೇಶಗಳು ಮತ್ತು ಮಾನವಹಕ್ಕುಗಳ ಗುಂಪುಗಳು ಆರೋಪಿಸಿವೆ.
ಉಯಿಘರ್ ಮುಸ್ಲಿಮರ ಮೇಲಿನ ದೌರ್ಜನ್ಯ, ಅವರ ಸ್ವೇಚ್ಛಾಚಾರದ ಬಂಧನ, ಬಲವಂತದ ಜೀತ, ಬಲವಂತದ ಬಯೋಮೆಟ್ರಿಕ್ ಮಾಹಿತಿಗಳ ವಸೂಲಿ ಮತ್ತು ವಂಶವಾಹಿ ವಿಶ್ಲೇಷಣೆಯಲ್ಲಿ ಚೀನಾ ಸರಕಾರದ ಪರವಾಗಿ ಈ 11 ಕಂಪೆನಿಗಳು ಪಾಲ್ಗೊಂಡಿವೆ ಎಂದು ಹೇಳಿಕೆಯೊಂದರಲ್ಲಿ ವಾಣಿಜ್ಯ ಇಲಾಖೆ ತಿಳಿಸಿದೆ.
ಇದಕ್ಕೂ ಮೊದಲು, ಉಯಿಘರ್ ಮುಸ್ಲಿಮರನ್ನು ಚೀನಾವು ನಡೆಸಿಕೊಂಡಿರುವ ರೀತಿಯು ‘ಶತಮಾನದ ಕಳಂಕ’ವಾಗಿದೆ ಎಂಬುದಾಗಿ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮೈಕ್ ಪಾಂಪಿಯೊ ಹೇಳಿದ್ದರು.
ಆದರೆ, ಈ ಎಲ್ಲ ಆರೋಪಗಳನ್ನು ನಿರಾಕರಿಸಿರುವ ಚೀನಾವು, ಉಯಿಘರ್ ಮುಸ್ಲಿಮರು ವೃತ್ತಿ ತರಬೇತಿ ಕೇಂದ್ರಗಳಿಗೆ ಹೋಗುತ್ತಿದ್ದಾರೆ ಎಂದು ಹೇಳಿಕೊಳ್ಳುತ್ತಿದೆ.







