ರಶ್ಯದ ಶ್ರೀಮಂತರಿಗೆ ಎಪ್ರಿಲ್‌ನಿಂದಲೇ ಕೊರೋನ ಪ್ರಾಯೋಗಿಕ ಲಸಿಕೆ?

ಮಾಸ್ಕೋ (ರಶ್ಯ), ಜು. 21: ರಶ್ಯದಲ್ಲಿ ಕೋವಿಡ್-19 ಲಸಿಕೆಯೊಂದು ಪ್ರಾಯೋಗಿಕ ಹಂತದಲ್ಲಿರುವಾಗಲೇ ದೇಶದ ಹಲವಾರು ಉನ್ನತ ರಾಜಕೀಯ ನಾಯಕರು ಮತ್ತು ಶ್ರೀಮಂತ ಉದ್ಯಮಿಗಳಿಗೆ ಅದನ್ನು ಈಗಾಗಲೇ ನೀಡಲಾಗಿದೆ ಎಂದು ಬಲ್ಲ ಮೂಲಗಳು ತಿಳಿಸಿವೆ ಎಂದು ‘ಬ್ಲೂಮ್‌ಬರ್ಗ್’ ಮಾಧ್ಯಮ ಸಂಸ್ಥೆ ವರದಿ ಮಾಡಿದೆ.
ರಾಜಧಾನಿ ಮಾಸ್ಕೋದಲ್ಲಿರುವ ಸರಕಾರಿ ಒಡೆತನದ ಗಮಲೇಯ ಇನ್‌ಸ್ಟಿಟ್ಯೂಟ್ ಅಭಿವೃದ್ಧಿಪಡಿಸುತ್ತಿರುವ ಲಸಿಕೆಯ ಡೋಸ್‌ಗಳನ್ನು ಬೃಹತ್ ಅಲ್ಯೂಮಿನಿಯಂ ಕಂಪೆನಿ ಯುನೈಟೆಡ್ ಕೋ ರೂಸಲ್ ಸೇರಿದಂತೆ ಹಲವಾರು ಕಂಪೆನಿಗಳ ಉನ್ನತ ಅಧಿಕಾರಿಗಳು, ಬಿಲಿಯಾಧೀಶ ಉದ್ಯಮಿಗಳು ಮತ್ತು ಸರಕಾರಿ ಅಧಿಕಾರಿಗಳಿಗೆ ಎಪ್ರಿಲ್‌ನಿಂದಲೇ ಕೊಡುತ್ತಾ ಬರಲಾಗಿದೆ ಎಂದು ಮೂಲಗಳು ತಿಳಿಸಿವೆ.
ಸರಕಾರಿ ಒಡೆತನದ ರಶ್ಯನ್ ಡೈರೆಕ್ಟ್ ಇನ್ವೆಸ್ಟ್‌ಮೆಂಟ್ ಫಂಡ್‌ನಿಂದ ನಿಧಿ ಪಡೆಯುತ್ತಿರುವ ಹಾಗೂ ರಕ್ಷಣಾ ಸಚಿವಾಲಯದ ಬೆಂಬಲ ಹೊಂದಿರುವ ಗಮಲೇಯ ಲಸಿಕೆಯ ಮೊದಲ ಹಂತದ ಪ್ರಯೋಗ ಕಳೆದ ವಾರ ಪೂರ್ಣಗೊಂಡಿದೆ. ಮೊದಲ ಹಂತದ ಪ್ರಯೋಗವನ್ನು ಸೇನಾ ಸಿಬ್ಬಂದಿ ಮೇಲೆ ಮಾಡಲಾಗಿತ್ತು.
ಮೊದಲ ಹಂತದ ಪ್ರಯೋಗದ ಫಲಿತಾಂಶವನ್ನು ಇನ್‌ಸ್ಟಿಟ್ಯೂಟ್ ಪ್ರಕಟಿಸಿಲ್ಲ. ಬದಲಿಗೆ, ಹೆಚ್ಚು ಜನರನ್ನು ಒಳಗೊಂಡ ಎರಡನೇ ಹಂತದ ಪ್ರಯೋಗವನ್ನು ಅದು ಆರಂಭಿಸಿದೆ.
► ಪುಟಿನ್‌ಗೆ ಲಸಿಕೆ ನೀಡಲಾಗಿದೆಯೇ?
ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಈ ಪ್ರಾಯೋಗಿಕ ಲಸಿಕೆಯನ್ನು ತೆಗೆದುಕೊಂಡಿದ್ದಾರೆಯೇ ಎಂಬುದಾಗಿ ಸೋಮವಾರ ನಡೆದ ಅಶರೀರ ಪತ್ರಿಕಾಗೋಷ್ಠಿಯಲ್ಲಿ ಪತ್ರಕರ್ತರು ಪ್ರಶ್ನಿಸಿದಾಗ, ‘‘ಪ್ರಮಾಣೀಕೃತಗೊಳ್ಳದ ಲಸಿಕೆಯೊಂದನ್ನು ದೇಶವೊಂದರ ಮುಖ್ಯಸ್ಥರ ಮೇಲೆ ಪ್ರಯೋಗಿಸುವುದು ಸರಿಯಾದ ವಿಚಾರವಲ್ಲ’’ ಎಂದು ರಶ್ಯ ಸರಕಾರದ ವಕ್ತಾರ ಡಿಮಿಟ್ರಿ ಪೆಸ್ಕೊವ್ ಹೇಳಿದರು.
ಈ ಲಸಿಕೆಯನ್ನು ತೆಗೆದುಕೊಂಡವರ ಹೆಸರುಗಳು ನನಗೆ ಗೊತಿಲ್ಲ ಎಂದು ಅವರು ಹೇಳಿದರು.







