ಅಯೋಧ್ಯೆಯಲ್ಲಿ ಬುದ್ಧ ಮಂದಿರ ನಿರ್ಮಾಣಕ್ಕೆ ಒತ್ತಾಯಿಸಿ ಮೈಸೂರಿನಲ್ಲಿ ಧರಣಿ

ಮೈಸೂರು,ಜು.21: ಮುಂಬೈನ ದಾದರ್ ನಲ್ಲಿರುವ ಅಂಬೇಡ್ಕರ್ ನಿವಾಸದ ಮೇಲೆ ನಡೆದ ದಾಳಿ ಖಂಡಿಸಿ, ಅಯೋಧ್ಯೆಯ ರಾಮಂದಿರ ಸ್ಥಳದಲ್ಲಿ ಬುದ್ಧ ಮಂದಿರ ನಿರ್ಮಿಸಬೇಕೆಂದು ಒತ್ತಾಯಿಸಿ ನಾಗರಿಕ ಹಕ್ಕು ರಕ್ಷಣಾ ಸಮಿತಿ ವತಿಯಿಂದ ಧರಣಿ ನಡೆಸಲಾಯಿತು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗ ಮಂಗಳವಾರ ಪ್ರತಿಭಟನೆ ನಡೆಸಿ ಮಾತನಾಡಿದ ಪ್ರತಿಭಟನಾಕಾರರು, ಮುಂಬೈನ ದಾದರ್ ನಲ್ಲಿರುವ ಸಂವಿಧಾನ ಶಿಲ್ಪಿ, ಮಹಾಮಾನವತಾವಾದಿ ಡಾ.ಬಿ.ಆರ್.ಅಂಬೇಡ್ಕರ್ ಅವರ ರಾಜಗೃಹದ ಮೇಲೆ ದುಷ್ಕರ್ಮಿಗಳು ದಾಳಿ ನಡೆಸಿ ತಮ್ಮ ಅಟ್ಟಹಾಸ ಮೆರೆದಿದ್ದಾರೆ. ಇಡೀ ದೇಶವೇ ಈ ಕೃತ್ಯದಿಂದ ತಲೆತಗ್ಗಿಸುವಂತಾಗಿದೆ. ಆರ್ಯರ ಸಂಸ್ಕೃತಿಯನ್ನು ಹೊತ್ತುಮೆರೆಯುವ ಹಿಂದುತ್ವವಾದಿಗಳು ಈ ಕೃತ್ಯವನ್ನು ಎಸಗಿರಬಹುದೆಂದು ಅನುಮಾನ ಉಂಟಾಗಿರುವುದರಿಂದ ಈ ಕೃತ್ಯ ಎಸಗಿದವರನ್ನು ಈ ಕೂಡಲೇ ಪತ್ತೆ ಹಚ್ಚಿ ದೇಶದ್ರೋಹ ಕಾಯ್ದೆಯಡಿ ದೇಶದಿಂದ ಗಡಿಪಾರು ಮಾಡಬೇಕು. ಡಾ.ಬಿ.ಆರ್.ಅಂಬೇಡ್ಕರ್ ಅವರ ಕುಟುಂಬಕ್ಕೆ ನಿರಂತರವಾಗಿ ರಕ್ಷಣೆಯನ್ನು ಒದಗಿಸಬೇಕೆಂದು ಒತ್ತಾಯಿಸಿದರು.
ರಾಮನ ಹೆಸರಿನಲ್ಲಿ ಅಯೋಧ್ಯೆಯಲ್ಲಿ ರಾಮಂದಿರ ನಿರ್ಮಿಸುವುದನ್ನು ತಡೆಹಿಡಿದು ಅಯೋಧ್ಯೆಯ ರಾಮಮಂದಿರ ನಿರ್ಮಾಣ ಸ್ಥಳದಲ್ಲಿ ಬುದ್ಧನ ವಿಗ್ರಹಗಳು ದೊರೆತಿರುವುದರಿಂದ ವಿಶ್ವಕ್ಕೆ ಶಾಂತಿ ಸಾರಿದಂತಹ ಬುದ್ಧನ ಹೆಸರಿನಲ್ಲಿ ಬುದ್ಧ ಮಂದಿರ ನಿರ್ಮಿಸಬೇಕೆಂದು ಒತ್ತಾಯಿಸಿದರು. ಬಳಿಕ ಜಿಲ್ಲಾಧಿಕಾರಿಗಳ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಲಾಯಿತು.
ಪ್ರತಿಭಟನೆಯಲ್ಲಿ ಗೋವಿಂದರಾಜು, ತಾರಾ. ಕೃಷ್ಣಮೂರ್ತಿ, ಕೆ.ಎಲ್.ಕೃಷ್ಣಕುಮಾರ್, ವಿ.ಮಣಿಯಮ್ಮ, ರವಿಕುಮಾರ್ ಪುಟ್ಟಮಾದು, ಪಾರ್ವತಮ್ಮ, ಕೃಷ್ಣಾಬಾಯಿ, ಇಂದ್ರಮ್ಮ, ಮಹಮ್ಮದ್ ಮುನವರ್, ಭೀಮರಾಜ್ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.







